ಉದಯವಾಹಿನಿ, ಬೆಂಗಳೂರು: ಈ ತಿಂಗಳು ಕರೆಂಟ್ ಬಿಲ್ ಕೈಗೆ ಬಂದ ತಕ್ಷಣ ರಾಜ್ಯದ ಜನಕ್ಕೆ ಅಚ್ಚರಿ ಕಾದಿತ್ತು. ಹೌದು ೨೦೦ ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗುತ್ತೆ ಅಂತ ಖುಷಿಯಲ್ಲಿದ್ದ ಜನಕ್ಕೆ ಈ ತಿಂಗಳ ಸಾವಿರಾರು ರುಪಾಯಿ ಬಿಲ್ ನೋಡಿ ಗೊಂದಲಕ್ಕೊಳಗಾಗಿದ್ದರು. ಹಾಗಿದ್ದರೆ ನಿಮ್ಮ ಬಿಲ್ ಹೆಚ್ಚಾಗಲು ಕಾರಣ ಏನು. ಏಕಾಏಕಿ ದುಪ್ಪಟ್ಟು ಬರಲು ಕಾರಣ ಏನು, ಈ ಎಲ್ಲಾ ಪ್ರಶ್ನೆಗಳಿಗೆ ವಿಜಯ ಕರ್ನಾಟಕಕ್ಕೆ ಬೆಸ್ಕಾಂ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದ್ದಾರೆ. ಪ್ರತೀ ವರ್ಷ ಕೆಇಆರ್ ಸಿ (ರಾಜ್ಯ ವಿದ್ಯುತ್ ದರ ನಿಯಂತ್ರಣ ಆಯೋಗ) ದರ ಪರಿಷ್ಕರಣೆ ಮಾಡುತ್ತದೆ. ಇದಕ್ಕೆ ಎಲ್ಲಾ ಎಸ್ಕಾಂಗಳಿಂದ ಅರ್ಜಿ ಸಲ್ಲಿಸುತ್ತೇವೆ. ಅದರಂತೆ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ದರ ಪರಿಷ್ಕರಣೆ ಮಾಡಿದ್ದಾರೆ. ಹೀಗಾಗಿ ದರ ಹೆಚ್ಚಳ ಆಗಿದೆ. ಯೂನಿಟ್ ಗೆ 70 ಪೈಸೆ ಹೆಚ್ಚಳ ಆಗಿದೆ. ಜೊತೆಗೆ ಗೃಹ ಬಳಕೆಯ ನಾಲ್ಕು ಸ್ಲಾಬ್ ಗಳನ್ನು ಎರಡೇ ಸ್ಲ್ಯಾಬ್ (ಶ್ರೇಣಿ) ಮಾಡಲಾಗಿದೆ.
