ಉದಯವಾಹಿನಿ, ಭಾರತದಲ್ಲಿ ನಡೆಯುವ ಐಪಿಎಲ್ಗೆ (IPL) ಸೆಡ್ಡು ಹೊಡೆಯುವ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನ ಸೂಪರ್ ಲೀಗ್ (PSL) ಅನ್ನು ಐಪಿಎಲ್ ಆರಂಭವಾಗುವ ಸಮಯದಲ್ಲೇ ನಡೆಸಲು ಮುಂದಾಗಿದೆ. ಅದರಂತೆ 2026 ರ ಐಪಿಎಲ್ ಮಾರ್ಚ್ 28 ರಿಂದ ಆರಂಭವಾದರೆ, ಅದಕ್ಕೂ ಎರಡು ದಿನ ಮೊದಲು ಅಂದರೆ ಮಾರ್ಚ್ 26 ರಂದು ಪಾಕಿಸ್ತಾನ ಸೂಪರ್ ಲೀಗ್ ಆರಂಭಿಸಲು ಪಿಸಿಬಿ ತೀರ್ಮಾನಿಸಿತ್ತು. ಆದರೆ ಈ ಲೀಗ್ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ನಿರಂತರವಾಗಿ ನಡೆಯುತ್ತಿರುವ ಸಂಘರ್ಷ.
ವಾಸ್ತವವಾಗಿ ಮಾರ್ಚ್ 16 ರಂದು ಪಾಕಿಸ್ತಾನ, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವೈಮಾನಿಕ ದಾಳಿ ನಡೆಸಿ 400 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಎಂದು ವರದಿಯಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಈ ದಾಳಿಯು ಎರಡು ದೇಶಗಳ ನಡುವೆ ಯುದ್ಧದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಸರ್ಕಾರ ತನ್ನ ನಾಗರಿಕರು ಮತ್ತು ಆಟಗಾರರಿಗೆ ಪಾಕಿಸ್ತಾನದ ಪ್ರಮುಖ ನಗರಗಳಿಗೆ ಪ್ರಯಾಣಿಸದಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಪಿಎಸ್‌ಎಲ್ ನಡೆಯುವುದು ಅನುಮಾನ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಈ ಸಂಘರ್ಷ, ಪಿಎಸ್‌ಎಲ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಏಕೆಂದರೆ ಪಾಕಿಸ್ತಾನದ ಮೇಲೆ ಅಫ್ಘಾನಿಸ್ತಾನ ಪ್ರತಿಕಾರ ತೀರಿಸಿಕೊಳ್ಳದೆ ಬಿಡದು. ಆದ್ದರಿಂದ ಪಾಕಿಸ್ತಾನ ಸೂಪರ್ ಲೀಗ್ ನಡೆಯುವ ನಗರಗಳ ಮೇಲೆ ಅಫ್ಘಾನಿಸ್ತಾನ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಇದನ್ನು ಮನಗಂಡಿರುವ ಆಸ್ಟ್ರೇಲಿಯಾ ಸರ್ಕಾರ, ಪಿಎಸ್‌ಎಲ್‌ನಲ್ಲಿ ಆಡುವ ಆಸ್ಟ್ರೇಲಿಯಾ ಆಟಗಾರರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡಿದೆಯಾದರೂ, ದಾಳಿ ನಡೆಯಬಹುದಾಂತಹ ಸ್ಥಳಗಳಿಗೆ ಹೋಗದಂತೆ ಎಚ್ಚರಿಕೆ ನೀಡಿದೆ.
