ಉದಯವಾಹಿನಿ, ದಾವಣಗೆರೆ: ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 8 ಲಕ್ಷ ರೂ. ಪಡೆದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್​ ಆರೋಪಿಗಳನ್ನು ಜಗಳೂರು ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮಾರಪ್ಪ (58) ಮತ್ತು ಪ್ರಕಾಶ್ (29) ಬಂಧಿತ ಆರೋಪಿಗಳು. ಅರ್ಧ ಕೆಜಿ ನಕಲಿ ಚಿನ್ನದ ನಾಣ್ಯಗಳನ್ನು ನೀಡಿದ್ದ ಆರೋಪಿಗಳು, ಬಲವಂತವಾಗಿ ಹಣ ಕಸಿದುಕೊಂಡು ಪರಾರಿಯಾಗಿದ್ದರು.‌ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲುಕಿನ ಬಟನಳ್ಳಿ ಗ್ರಾಮದ ನಿವಾಸಿಗಳಾದ ಮಾರಪ್ಪ (58) ಮತ್ತು ಪ್ರಕಾಶ್ (29) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ವಂಚನೆ ಮಾಡಿದ್ದ 7.5 ಲಕ್ಷ ನಗದು ಹಣ ಸೇರಿದಂತೆ 2 ಗ್ರಾಂ ಅಸಲಿ ಮತ್ತು 505 ಗ್ರಾಂ ನಕಲಿ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ಸುರೇಶ್ ಎಂಬಾತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ತೆಲಂಗಾಣ ರಾಜ್ಯದ ನೆಲಗೊಂಡ ಜಿಲ್ಲೆಯ ಚಳಕುರ್ತಿ ತಾಂಡಾದ ರಮಾವತ್ ಭಾಸ್ಕರ್ ಎಂಬುವರು ಅಸಲಿ ಚಿನ್ನದ ನಾಣ್ಯಗಳೆಂದು ನಂಬಿ 8 ಲಕ್ಷ ನೀಡಿ ಮೋಸಕ್ಕೊಳಗಾಗಿದ್ದರು. ಮೋಸಕ್ಕೊಳಗಾದ ಭಾಸ್ಕರ್ ಜಗಳೂರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

 

Leave a Reply

Your email address will not be published. Required fields are marked *

error: Content is protected !!