ಉದಯವಾಹಿನಿ, ಬೆಳಗಾವಿ: ಕುಣಿಗಲ್ ತಾಲ್ಲೂಕಿನ ಸಹಕಾರಿ ರಂಗಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದ್ದಲ್ಲಿ ಮುಂದಿನ ವರ್ಷದಿಂದ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸಭಾ ಕಲಾಪದಲ್ಲಿ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. 2024-25ರಲ್ಲಿ ನಬಾರ್ಡ್‌ನಿಂದ 5,600 ಕೋಟಿ ರೂ. ಕಡಿಮೆ ಬಡ್ಡಿದರದಲ್ಲಿ ಬರಬೇಕಾಗಿತ್ತು. ಅದರಲ್ಲಿ 3,415 ಕೋಟಿ ರೂ. ಬಂದಿದ್ದು, 2,185 ಕೋಟಿ ರೂ.ಗಳ ಕೊರತೆಯಾಗಿದೆ. ಮಧುಗಿರಿ ತಾಲ್ಲೂಕಿಗೆ ಹೆಚ್ಚು ಅನುದಾನ ನೀಡಿ, ಕುಣಿಗಲ್ ತಾಲ್ಲೂಕಿಗೆ ಕಡಿಮೆಯಾಗಿರುವ ಬಗ್ಗೆ ಶಾಸಕರು ತಿಳಿಸಿದ್ದಾರೆ. ಆದರೆ ಮಧುಗಿರಿಯಲ್ಲಿ ಶೇ.26ರಷ್ಟು ಎಸ್‌ಸಿ, ಎಸ್‌ಟಿ ಸಮುದಾಯದವರಿದ್ದು, ಕುಣಿಗಲ್‌ನಲ್ಲಿ ಕೇವಲ ಶೇ.8ರಷ್ಟು ಮಾತ್ರ ಎಸ್‌ಸಿ, ಎಸ್‌ಟಿಗೆ ಸೇರಿದ ಸಮುದಾಯಗಳಿವೆ. ಆದ್ದರಿಂದ ಅನುದಾನದ ಹೆಚ್ಚಿನ ಪಾಲು ಮಧುಗಿರಿಗೆ ನೀಡಿರಬಹುದು. ಆದರೆ ಮುಂದಿನ ವರ್ಷದಿಂದ ಈ ತಾರತಮ್ಯವನ್ನು ಕಾನೂನು ಪ್ರಕಾರ ನಿವಾರಣೆ ಮಾಡಲಾಗುವುದು ಎಂದರು.
ಕುಣಿಗಲ್ ತಾಲ್ಲೂಕಿನಲ್ಲಿ 4 ಲಕ್ಷ ಪಹಣಿ ಇದ್ದು, 1 ಲಕ್ಷ ರೈತರಿದ್ದಾರೆ. ಆದರೆ ಡಿಸಿಸಿ ಬ್ಯಾಂಕ್‌ಗಳ ಮೂಲಕ ಕೇವಲ 20 ರೈತರಿಗೆ ಮಾತ್ರ ಅಲ್ಪಾವಧಿ ಸಾಲ ಕೊಟ್ಟಿರುತ್ತಾರೆ. ರೈತರ ಹಣವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿರುವ ಇಂತಹ ಸಂಘಗಳಿಂದ ರೈತರ ರಕ್ಷಣೆಗೆ ಸರ್ಕಾರ ಬರಬೇಕಿದೆ ಎಂದು ಕುಣಿಗಲ್ ಶಾಸಕ ಡಾ. ಹೆಚ್.ಡಿ.ರಂಗನಾಥ್ ಅವರು ತಮ್ಮ ಪ್ರಶ್ನೆಯ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆದರು

Leave a Reply

Your email address will not be published. Required fields are marked *

error: Content is protected !!