ಉದಯವಾಹಿನಿ, ಮಂಡ್ಯ: ಇತ್ತೀಚೆಗೆ ದೇಶದಾದ್ಯಂತ ಕರ್ನಾಟಕ ಸರ್ಕಾರ ಸಾಕಷ್ಟು ವಿಚಾರದಲ್ಲಿ ಸುದ್ದಿಯಲ್ಲಿದೆ. ಅದರಲ್ಲೂ ರಾಜ್ಯದ ಕಾನೂನು ವ್ಯವಸ್ಥೆ ನಾನಾ ರೀತಿಯ ಆಯಾಮಗಳಲ್ಲಿ ಚರ್ಚೆಯಾಗ್ತಿದೆ. ಇದರ ನಡುವೆಯೇ, ರಾಜ್ಯದ ಪ್ರಭಾವಿ ಕಾಂಗ್ರೆಸ್‌ ಶಾಸಕರೊಬ್ಬರ ಆತಂಕಕಾರಿ ಹೇಳಿಕೆ, ಚರ್ಚೆಯ ಗಂಭೀರತೆ ಪ್ರಶ್ನೆ ಮಾಡುವಂತೆ ಮಾಡಿದೆ. ನಿನ್ನೆಯಷ್ಟೇ ಸಕ್ಕರೆನಾಡು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಕೆಡಿಪಿ ಸಭೆ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗಂಭೀರ ವಿಚಾರವೊಂದನ್ನ ಪ್ರಸ್ತಾಪಿಸಿದ್ದಾರೆ.
ಮಂಡ್ಯದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆಯನ್ನ ಸಚಿವ ಚಲುವರಾಯಸ್ವಾಮಿ ವಹಿಸಿದ್ರು. ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು, ತಮಗೆ ಭೂಗಳ್ಳರಿಂದ ಜೀವ ಬೆದರಿಕೆ ಇರೋ ವಿಚಾರ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ಶಾಸಕ ನರೇಂದ್ರಸ್ವಾಮಿ ತಮ್ಮ ಸ್ವಕ್ಷೇತ್ರ ಮಳವಳ್ಳಿ ತಾಲೂಕಿನಲ್ಲಿ ನಡೆದಿರುವ ಭೂಗಳ್ಳತನದ ವಿರುದ್ಧ ಧ್ವನಿ ಎತ್ತಿದ್ರು. ಮಳವಳ್ಳಿ ತಾಲೂಕು ಒಂದರಲ್ಲೇ 2,500 ಎಕರೆಗೂ ಹೆಚ್ಚಿನ ಸರ್ಕಾರಿ ಆಸ್ತಿಯನ್ನ ಭೂಗಳ್ಳರು ಕಬಳಿಸಿದ್ದಾರೆ ಅಂತಾ ಆರೋಪಿಸಿದ್ರು. ಈ ಬಗ್ಗೆ ಸದನದಲ್ಲೂ ಚರ್ಚಿಸಿದ ಪರಿಣಾಮ ಸರ್ಕಾರ ತನಿಖಾ ತಂಡ ಕೂಡ ರಚಿಸಿತ್ತು. ತನಿಖಾ ತಂಡದ ವರದಿ ಆಧರಿಸಿ, ಭೂಗಳ್ಳರ ಪಾಲಾಗಿದ್ದ ಸುಮಾರು 800 ಎಕರೆ ಸರ್ಕಾರಿ ಭೂಮಿ ಮತ್ತೆ ಸರ್ಕಾರದ ವಶಕ್ಕೆ ಸೇರಿದೆ. ಇದು ಭೂಗಳ್ಳರ ಆಕ್ರೋಶಕ್ಕೆ ಕಾರಣವಾಗಿದ್ದು ಶಾಸಕ ನರೇಂದ್ರಸ್ವಾಮಿ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರಂತೆ. ಈ ವಿಚಾರವನ್ನ ಸಚಿವ, ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲೇ ಪ್ರಸ್ತಾಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!