ಉದಯವಾಹಿನಿ, ಬೆಂಗಳೂರು: ನಮ್ಮದಲ್ಲದ ಹೊರಗಿನ ವಸ್ತುಗಳಿಗೆ ನಮ್ಮ ದೇಹ ತೋರಿಸುವ ಪ್ರತಿರೋಧಕ ಪ್ರತಿಕ್ರಿಯೆಯನ್ನೇ ಅಲರ್ಜಿ ಎನ್ನಬಹುದು. ಹೊರಗಿನ ವಸ್ತುಗಳು ಅಥವಾ ಅಲರ್ಜನ್‌ಗಳು ನಮಗೆ ಹಾನಿಕಾರಕವೇನೂ ಆಗಿರದಿದ್ದರೂ ಕೆಲವೊಮ್ಮೆ ಸ್ವಲ್ಪ ʻಅಧಿಕʼ ಎನ್ನಬಹುದಾದ ಪ್ರತಿಕ್ರಿಯೆಯನ್ನು ದೇಹ (Health tips) ತೋರಿಸುತ್ತದಷ್ಟೆ. ಬಂದಿರುವ ಅಲರ್ಜನ್ ಯಾವುದು ಎಂಬುದರ ಮೇಲೆ ದೇಹ ತೋರಿಸುವ ಪ್ರತಿಕ್ರಿಯೆ ಏನು ಮತ್ತು ಎಷ್ಟು ತೀವ್ರ ಎಂಬುದು ನಿರ್ಧಾರವಾಗುತ್ತದೆ. ಉದಾ: ಕೆಮ್ಮು, ಸೀನು, ನೆಗಡಿ, ಉಸಿರಾಟದ ತೊಂದರೆ, ಉರಿಯೂತ, ಕಣ್ಣುರಿ, ಚರ್ಮದ ಮೇಲೆ ನವೆ, ಗುಳ್ಳೆಗಳು ಇತ್ಯಾದಿ. ಕೆಲವೊಮ್ಮೆ ಪ್ರಾಣಾಪಾಯ ಆಗುವ ಮಟ್ಟಕ್ಕೂ ಅಲರ್ಜಿ ಕಾಣಿಸಬಹುದು. ಅಂದರೆ ಕೆಲವು ಆಹಾರ, ಔಷಧ ಇತ್ಯಾದಿಗಳಿಗೆ ಅತಿರೇಕದ ಪ್ರತಿಕ್ರಿಯೆಯನ್ನು ದೇಹ ತೋರಿಸುತ್ತದೆ. ಉದಾ, ತೀವ್ರ ಉಸಿರಾಟದ ತೊಂದರೆ, ಎಚ್ಚರ ತಪ್ಪುವುದು ಆದಾಗ ತಕ್ಷಣವೇ ವೈದ್ಯರನ್ನು ಕಾಣಬೇಕಾಗುತ್ತದೆ.ಆಹಾರದ ಅಲರ್ಜಿಗಳು: ಹಾಲು, ಗೋಧಿ, ಅಣಬೆ, ಈಸ್ಟ್, ಮೊಟ್ಟೆ, ಶೇಂಗಾ, ಗೋಡಂಬಿ ಮತ್ತಿತರ ಒಣಹಣ್ಣು, ಬೀಜ… ಹೀಗೆ ಹಲವಾರು ರೀತಿಯ ಆಹಾರಗಳನ್ನು ದೇಹ ʻತನಗಲ್ಲʼ ಎಂಬಂತೆ ತಿರಸ್ಕರಿಸಬಹುದು. ಅದನ್ನು ಅಲರ್ಜನ್ ಎಂದು ಭಾವಿಸಿ ಪ್ರತಿರೋಧ ತೋರಬಹುದು. ಇಂಥ ಆಹಾರಗಳನ್ನು ತಿಂದ ತಕ್ಷಣ ಉರಿಯೂತ, ಚರ್ಮ ಕೆಂಪಾಗಿ ತುರಿಕೆಯಾಗುವುದು, ಬಾಯಿ-ಗಂಟಲು ಬಿಗಿಯುವುದು, ಹೊಟ್ಟೆ ತೊಳೆಸಿದ ಅನುಭವ, ವಾಂತಿ, ಆಯಾಸ, ತಲೆಸುತ್ತು, ಉಸಿರಾಟದ ತೊಂದರೆಯಂಥ ಹಲವು ಪ್ರತಿಕ್ರಿಯೆಗಳನ್ನು ದೇಹ ತೋರಿಸುತ್ತದೆ. ಯಾವ ಆಹಾರಕ್ಕೆ ಹೀಗಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಚಿಕಿತ್ಸೆ ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚಿನ ಅರಿವು-ಚಿಕಿತ್ಸೆಗಾಗಿ ವೈದ್ಯರನ್ನು ಕಾಣುವುದು ಸೂಕ್ತ. ಋತುಮಾನದ ಅಲರ್ಜಿಗಳು: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಎದೆ ಬಿಗಿಯುವುದು, ವಿಪರೀತ ನೆಗಡಿ, ಕೆಮ್ಮು, ಅಸ್ತಮಾ… ಹೀಗೆಲ್ಲಾ ತೊಂದರೆ ಅನುಭವಿಸುವವರ ಸಂಖ್ಯೆ ಅಪಾರ. ಅಲರ್ಜಿ ಪ್ರಮಾಣ ಕಡಿಮೆಯಿದ್ದರೆ ಸ್ವಲ್ಪ ಮನೆಮದ್ದುಗಳೂ ಉಪಶಮನ ನೀಡಬಹುದು. ಹೆಚ್ಚಿದ್ದರೆ ಮಾತ್ರ ಅನಾರೋಗ್ಯದ ಲಕ್ಷಣಗಳು ಆರಂಭವಾಗುವ ಮುನ್ನವೇ ವೈದ್ಯರು ಔಷಧಿಯನ್ನು ಆರಂಭಿಸಲು ಹೇಳುತ್ತಾರೆ. ಇದರಿಂದ ನರಳುವ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
