ಉದಯವಾಹಿನಿ, ತುಮಕೂರು: ಬರೋಬ್ಬರಿ 19 ನವಿಲುಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ. ರೈತರು ಬೆಳ್ಳಂ ಬೆಳಗ್ಗೆ ತಮ್ಮ ಹೊಲಗದ್ದೆಗಳಿಗೆ ಹೋದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ನವಿಲುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.ರೈತರು ನವಿಲುಗಳು ಮೃತಪಟ್ಟಿರುವ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ನವಿಲುಗಳ ಮೃತದೇಹವನ್ನು ಪ್ರಾಥಮಿಕ ಪರೀಕ್ಷೆಗಾಗಿ ಸ್ಥಳೀಯ ಪಶುಪಾಲನ ಇಲಾಖೆ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ ಕೆರೆ ಕೋಡಿ ಜಲಪಾತದ ಬಳಿ ಆಗಸ್ಟ್ 2 ರಂದು ನವಿಲಿನ ಮೊದಲ ಕಳೇಬರ ಪತ್ತೆಯಾಗಿತ್ತು. ಬಳಿಕ ಐದು ಗಂಡು ಮತ್ತು 14 ಹೆಣ್ಣು ನವಿಲುಗಳ ಕಳೇಬರಗಳು ಹೊಲಗಳಲ್ಲಿ ಅಲ್ಲಲ್ಲಿ ಬಿದ್ದಿರುವುದು ಕಂಡುಬಂದಿದೆ. ಆಗಸ್ಟ್ 1 ರ ರಾತ್ರಿ ನವಿಲುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ನವಿಲುಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನವಿಲುಗಳಿಗೆ ವಿಷ ಇಟ್ಟು ಸಾಯಿಸಿರುವ ಅನುಮಾನ ಬಲವಾಗಿ ವ್ಯಕ್ತವಾಗಿದೆ.
