
ಉದಯವಾಹಿನಿ, ಬೆಂಗಳೂರು: ಸಿಎಂ ಜೊತೆ ಇಂದು ನಡೆದ ರಸ್ತೆ ಸಾರಿಗೆ ನೌಕರರ ಸಂಧಾನ ಸಭೆ ವಿಫಲವಾಗಿದೆ. ಪಟ್ಟು ಬಿಡದ ಸಾರಿಗೆ ನೌಕರರು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ರಸ್ತೆ ಸಾರಿಗೆ ನೌಕರರ ಸುದೀರ್ಘ ಸಭೆ ನಡೆಸಲಾಯಿತು. ಸತತವಾಗಿ 2:30ಗಂಟೆಗಳ ಕಾಲ ಸಭೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್, ಸಭೆ ವಿಫಲವಾಗಿದೆ. ಮುಷ್ಕರ ನಡೆಯುತ್ತದೆ. ಸರ್ಕಾರಕ್ಕೂ ನಮಗೂ ಚರ್ಚೆ ನಡೀತು. ಪ್ರಮುಖವಾಗಿ 38 ತಿಂಗಳ ವೇತನ ಬಾಕಿ ಮತ್ತು ವೇತನ ಹೆಚ್ಚಳ ಬಗ್ಗೆ ಚರ್ಚೆ ನಡೀತು. ಎರಡು ವರ್ಷ ಕೊಡುತ್ತೇವೆ. ಇನ್ನೆರಡು ವರ್ಷ ಕೊಡುವುದಕ್ಕೆ ಆಗುವುದಿಲ್ಲ ಅಂದ್ರು. ವೇತನ ಹೆಚ್ಚಳದ ಬಗ್ಗೆ ಅವರು ಯಾವ ನಿರ್ಣಯ ಹೇಳಿಲ್ಲ. ಹಾಗಾಗಿ ನಮ್ಮ ಯಾವುದೇ ಬೇಡಿಕೆ ಈಡೇರಿಲ್ಲ ಎಂದರು. ಇದೇ ವೇಳೆ ಮಾತನಾಡಿದ ಸಾರಿಗೆ ಸಂಘಟನೆ ಮುಖಂಡ ಮಂಜುನಾಥ್, 18 ತಿಂಗಳ ಹಿಂದೆ ವೇತನ ಹೆಚ್ಚಳ ಮಾಡಿ ಅಂತ ಬೇಡಿಕೆ ಇಟ್ಟಿದ್ದೆವು. ಆದರೆ, ಕೊನೆ ಕ್ಷಣದಲ್ಲಿ ಮೀಟಿಂಗ್ ಮಾಡಿದ್ದಾರೆ. ನಾವು ಅವರ ಯಾವ ಆಶ್ವಾಸನೆಗೂ ಒಪ್ಪಲ್ಲ. ವೇತನ ಪರಿಷ್ಕರಣೆ ಬಗ್ಗೆ ಮುಖ್ಯಮಂತ್ರಿಗಳು ಬಾಯಿ ಬಿಡೋಕು ರೆಡಿ ಇಲ್ಲ. ಮತ್ತೆ ಸರ್ಕಾರ ಮಾತುಕತೆಗೆ ಕರೆದರೆ ನಾವು ಬರೋಲ್ಲ. ಸಾರಿಗೆ ನಿಗಮಗಳ ನೌಕರರು ಮುಷ್ಕರ ಮಾಡಿ ನಿಮ್ಮ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳಿ. ನಮ್ಮ ಜಂಟಿ ಕ್ರಿಯಾ ಸಮಿತಿಯಿಂದ ಮುಷ್ಕರಕ್ಕೆ ಕರೆ ಕೊಡ್ತೇವೆ. ಇತರ ಸಂಘಟನೆಗಳು ಕೂಡ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಒಂದು ಲಕ್ಷ ಹದಿನೈದು ಸಾವಿರ ನೌಕರರು ಭಾಗಿಯಾಗ್ತಾರೆ. ಆಡಳಿತ ಪಕ್ಷದ ಯಾವುದೇ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಮುಷ್ಕತ ನೂರಕ್ಕೆ ನೂರು ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ಯಾವುದೇ ಶಿಸ್ತು ಕ್ರಮಕ್ಕೆ ಸಾರಿಗೆ ನೌಕರರು ಬಗ್ಗೋದಿಲ್ಲ. ಈ ಹಿಂದೆ ಹಲವು ಸಲ ಅವರು ಪ್ರತಿಭಟನೆ ಮಾಡಿದ್ದಾರೆ. ನಾವು ಪ್ರತಿಭಟನೆ ಮಾಡುವ ದಿನದ ಸಂಬಳ ಕೇಳೋದಿಲ್ಲ. ಯಾರೂ ಅದನ್ನು ನಿರೀಕ್ಷೆ ಮಾಡಬೇಡಿ. ನಮ್ಮ ರಕ್ಷಣೆ ನಾವು ಮಾಡಿಕೊಳ್ಳೋಣ. ಯಾರೂ ಹೆದರುವ ಅಗತ್ಯ ಇಲ್ಲ. ಸರ್ಕಾರದ ತಾತ್ಸಾರದ ಭಾವನೆ ಹೋಗಲಾಡಿಸಬೇಕಾಗಿದೆ. 38 ತಿಂಗಳ ಅರಿಯರ್ಸ್ ಕೊಡೋದು ಸರ್ಕಾರಕ್ಕೆ ದೊಡ್ಡ ವಿಚಾರ ಅಲ್ಲ. ಈ ಹಿಂದೆಯೂ ನಮಗೆ ಭರವಸೆ ಕೊಟ್ಟು ಪ್ರಾಮಾಣಿಕತೆ ತೋರಿಲ್ಲ. ಪ್ರೈವೇಟ್ ಬಸ್ ಆಪರೇಟ್ ಅವ್ರಿಗೆ ಬಿಟ್ಟಿದ್ದು. ಯಾರನ್ನು ಅಮಾನತು ಮಾಡಿದ್ದರೂ ಜಂಟಿ ಕ್ರಿಯಾ ಸಮಿತಿ ಅವರ ಪರ ನಿಲ್ಲುತ್ತೆ ಎಂದರು.
