ಉದಯವಾಹಿನಿ, ಬೆಂಗಳೂರು : ಮಂಗಳೂರು ಕುಕ್ಕರ್‌ ಬಾಂಬ್‌ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸೈಯದ್‌ ಯಾಸಿನ್‌ನ ಬ್ಯಾಂಕ್‌ ಖಾತೆಯಲ್ಲಿದ್ದ 29 ಸಾವಿರ ರೂ. ಹಣವನ್ನು ಜಾರಿ ನಿರ್ದೇಶನಾಲಯವು(ಇ.ಡಿ.) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಮುಟ್ಟುಗೋಲು ಹಾಕಿಕೊಂಡಿದೆ.ಮತ್ತೊಂದೆಡೆ ಶಂಕಿತ ಉಗ್ರರು ಧರ್ಮಸ್ಥಳ ದೇವಾಲಯದಲ್ಲಿ ಬಾಂಬ್‌ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ವಿಚಾರವನ್ನ ಇ.ಡಿ. ಬಯಲಿಗೆಳೆದಿದೆ. ಪ್ರಮುಖ ಆರೋಪಿ ಮೊಹಮದ್‌ ಶಾರಿಕ್‌ ಈ ಬಾಂಬ್‌ ಅನ್ನು ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಾಲಯದಲ್ಲಿ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದ. ಬಾಂಬ್‌ ಟೈಮರ್‌ ಅನ್ನು 90 ನಿಮಿಷಗಳ ಬದಲು 9 ಸೆಕೆಂಡ್‌ಗೆ ನಿಗದಿ ಮಾಡಿದ್ದ ಪರಿಣಾಮ ಅದು ಮಾರ್ಗ ಮಧ್ಯೆಯೇ ಆಟೋರಿಕ್ಷಾದೊಳಗೆ ಸ್ಫೋಟವಾಗಿತ್ತು.
ಐಸಿಸ್‌‍ ಆನ್‌ಲೈನ್‌ ಹ್ಯಾಂಡ್ಲರ್‌ ಕರ್ನಲ್‌ ಕಳುಹಿಸುತ್ತಿದ್ದ ಹಣವನ್ನು ಆರೋಪಿ ಮೊಹಮದ್‌ ಶಾರೀಕ್‌ ಸ್ವೀಕರಿಸಲು ಮತ್ತೊಬ್ಬ ಆರೋಪಿ ಮಾಜ್‌ ಮುನೀರ್‌ ಈ ಅನಧಿಕೃತ ಬ್ಯಾಂಕ್‌ ಖಾತೆಗಳ ಮಾಹಿತಿ ನೀಡುತ್ತಿದ್ದ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ.ಡಿ. ತಿಳಿಸಿದೆ.

ಐಸಿಸ್‌‍ ಆನ್‌ಲೈನ್‌ ಹ್ಯಾಂಡ್ಲರ್‌ ಕರ್ನಲ್‌ ಎಂಬಾತ ಪ್ರಮುಖ ಆರೋಪಿ ಮೊಹಮದ್‌ ಶಾರಿಕ್‌ ಅಲಿಯಾಸ್‌‍ ಪ್ರೇಮ್‌ರಾಜ್‌ ಮತ್ತು ಇತರ ಆರೋಪಿಗಳಿಗೆ ವಿಕರ್‌ ಆ್ಯಪ್‌/ಟೆಲಿಗ್ರಾಮ್‌ ಇತ್ಯಾದಿ ಆಪ್‌ಗಳ ಮುಖಾಂತರ ಸುಧಾರಿತ ಸ್ಫೋಟಕ ಸಾಧನ(ಐಇಡಿ) ತಯಾರಿಸಲು ತರಬೇತಿ ನೀಡಿರುವುದು ಮತ್ತು ಆರೋಪಿಗಳಿಗೆ ಅನಧಿಕೃತ ಬ್ಯಾಂಕ್‌ ಖಾತೆ ಮತ್ತು ಕ್ರಿಪ್ರೋ ಕರೆನ್ಸಿಗಳ ಮುಖಾಂತರ ಹಣಕಾಸು ನೆರವು ನೀಡಿರುವುದು ಬೆಳಕಿಗೆ ಬಂದಿತ್ತು.

Leave a Reply

Your email address will not be published. Required fields are marked *

error: Content is protected !!