ಉದಯವಾಹಿನಿ, ಬೆಂಗಳೂರು: ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ತಮ ಸಹಮತ ಇದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತದ ಸರಕುಗಳ ಮೇಲೆ ಅಮೆರಿಕಾ ಅಧ್ಯಕ್ಷರು ಹೆಚ್ಚುವರಿ ಸುಂಕ ವಿಧಿಸಿರುವುದನ್ನು ಪ್ರಶ್ನಿಸಿದ್ದಾರೆ. ತಮ ಸಾಮಾಜಿಕ ಜಾಲತಾಣದಲ್ಲಿ ಅವರು, ಅಮೆರಿಕಾ ಅಧ್ಯಕ್ಷರು ಭಾರತೀಯ ಸರಕುಗಳಿಗೆ ಶೇ. 50ರಷ್ಟು ಸುಂಕ ವಿಧಿಸಿರುವುದು ಆರ್ಥಿಕ ಬ್ಲಾಕ್‌ಮೇಲ್‌ ಎಂದು ಬಣ್ಣಿಸಿದ್ದಾರೆ.
ಪ್ರಧಾನಿಮಂತ್ರಿ ಮೋದಿ ನಿಜವಾದ ರಾಜತಾಂತ್ರಿಕತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಜಿಎಸ್‌‍ಟಿ, ನೋಟು ರದ್ದತಿ, ಚೀನಾದ ಆಕ್ರಮಣ, ಮೋದಿ ಮತ್ತು ಅದಾನಿ ಅವರ ನಂಟು, ಕೋವಿಡ್‌ನ ವೈಫಲ್ಯ, ಕೃಷಿ ಕಾನೂನುಗಳು, ರಫೇಲ್‌ ಹಗರಣ, ಪಿಎಂ-ಕೇರ್‌ ನಿಧಿ, ಚುನಾವಣಾ ಬಾಂಡ್‌ ಸಂಬಂಧಪಟ್ಟಂತೆ ರಾಹುಲ್‌ಗಾಂಧಿ ಅವರು ಮೊದಲೇ ಹೇಳಿಕೆಗಳನ್ನು ನೀಡಿದರು. ಬಿಜೆಪಿ ಅವರನ್ನು ಅಪಹಾಸ್ಯ ಮಾಡಿತ್ತು. ಆದರೆ ತಮ ಹೆಳಿಕೆಗಳನ್ನು ರಾಹುಲ್‌ ಗಾಂಧಿ ಪದೇ-ಪದೇ ಸಾಬೀತು ಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

2019ರಲ್ಲಿ ಹೌಡಿ ಮೋದಿ ಹಾಗೂ ನಮಸ್ತೆ ಟ್ರಂಪ್‌ ಎಂಬ ಕಾರ್ಯಕ್ರಮಗಳು ಪರಸ್ಪರ ಅಮೆರಿಕಾ ಮತ್ತು ಭಾರತದಲ್ಲಿ ನಡೆದಿದ್ದವು. ಆದರೆ ಈ ಯಾವ ಕಾರ್ಯಕ್ರಮಗಳಿಂದಲೂ ಟ್ರಂಪ್‌ ಪ್ರಭಾವಿತರಾಗಿಲ್ಲ ಹಾಗೂ ರಾಜತಾಂತ್ರಿಕತೆಯಿಂದ ಗಮನಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಭಾರತದ ಮೇಲೆ ತೆರಿಗೆ ವಿಧಿಸಿರುವುದು ನಿಜವಾದ ಸ್ನೇಹಿತರು ಮಾಡುವ ಕೆಲಸವಲ್ಲ. ಆಪರೇಷನ್‌ ಸಿಂಧೂರ ಕಾರ್ಯಚರಣೆ ನಡುವೆ ಕದನ ವಿರಾಮಕ್ಕೆ ನಾನೇ ಕಾರಣ ಎಂದು ಟ್ರಂಪ್‌ 33 ಬಾರಿ ಹೇಳಿಕೊಂಡಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ಅಮೆರಿಕದಲ್ಲಿ ಆತಿಥ್ಯ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Leave a Reply

Your email address will not be published. Required fields are marked *

error: Content is protected !!