ಉದಯವಾಹಿನಿ, ರಕ್ತದಾನವನ್ನು ಜೀವದಾನ ಎಂದೇ ಹೇಳಲಾಗುತ್ತದೆ. ಅಷ್ಟರಮಟ್ಟಿಗೆ ಓರ್ವ ವ್ಯಕ್ತಿಯ ಜೀವ ರಕ್ಷಣೆಯಲ್ಲಿ ರಕ್ತದಾನ ಮಹತ್ವದ ಸ್ಥಾನ ಪಡೆದುಕೊಂಡಿದೆ. ಈ ರಕ್ತದಾನದಲ್ಲಿ ದಾನ ಪಡೆಯುವವರ ಜೊತೆಗೆ ದಾನ ನೀಡುವವರಿಗೂ ಬಹಳ ಉಪಯೋಗವಿದೆ.ರಕ್ತದಾನದ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳೋಣ
ರಕ್ತದಾನ ಹಲವಾರು ವಿಧಗಳಲ್ಲಿ ಜೀವ ಉಳಿಸುತ್ತದೆ. ಗರ್ಭದಲ್ಲಿರುವ ಬೆಳೆಯುತ್ತಿರುವ ಆದರೆ ತೀವ್ರ ರಕ್ತಹೀನತೆ ಹೊಂದಿರುವ ಶಿಶುಗಳಿಗೆ ರಕ್ತ ವರ್ಗಾವಣೆಯಿಂದ ಹಿಡಿದು, ಪದೇ ಪದೇ ಕೆಂಪು ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ಗಳ ಅಗತ್ಯವಿರುವ ಕೀಮೋಥೆರಪಿಗೆ ಒಳಗಾಗುವ ಕ್ಯಾನ್ಸರ್ ರೋಗಿಗಳವರೆಗೆ, ಹಲವಾರು ಗಂಭೀರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದು ಸಹಾಯ ಮಾಡುತ್ತದೆ.ರಕ್ತ ಕಣಗಳ ಕಾಯಿಲೆಗಳಾದ ಥಲಸ್ಸೆಮಿಯಾ ಮತ್ತು ಕುಡಗೋಲು ಕೋಶ ರಕ್ತಹೀನತೆ (ಸಿಕಲ್ ಸೆಲ್ ಅನೀಮಿಯಾ) ಯಂತಹ ದೀರ್ಘಕಾಲದ ಪರಿಸ್ಥಿತಿಗಳನ್ನು ಹೊಂದಿರುವ ಜನರಿಗೆ ಜೀವಿತಾವಧಿಯ ರಕ್ತ ವರ್ಗಾವಣೆಯ ಅನಿವಾರ್ಯತೆ ಇರುತ್ತದೆ. ಇಷ್ಟೇ ಅಲ್ಲದೆ, ಅಂಗಾಂಗ ಕಸಿ ಸ್ವೀಕರಿಸುವವರು ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ತೊಡಕುಗಳನ್ನು ಹೊಂದಿರುವ ತಾಯಂದಿರಿಗೂ ರಕ್ತದ ಅಗತ್ಯವಿರುತ್ತದೆ. ಇಂತಹ ಸಂದರ್ಭಗಳಲ್ಲಿ, ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ನಷ್ಟವಾದ ರಕ್ತವನ್ನು ಮರು ಪೂರೈಸಲು ಹೊಸ ರಕ್ತದ ಅವಶ್ಯಕತೆಯಿರುತ್ತದೆ. ಹೀಗಾಗಿ ಬ್ಲಡ್ ಬ್ಯಾಂಕ್ಗಳಲ್ಲಿ, ಆಸ್ಪತ್ರೆಗಳಲ್ಲಿ ರಕ್ತದ ಶೇಖರಣೆ ಇರುವುದು ತುರ್ತು ಚಿಕಿತ್ಸೆಗೆ ನೆರವಾಗುತ್ತದೆ. ರಕ್ತದಾನಿಗಳ ಅವಶ್ಯಕತೆ ಅಧಿಕವಾಗಿರುತ್ತದೆ.
ರಕ್ತದಾನಿಗಳಿಗೆ, ಇದು ಕೇವಲ ಒಂದು ಉದಾತ್ತ ಕಾರ್ಯವಲ್ಲ, ಆರೋಗ್ಯಕರವೂ ಆಗಿದೆ. ನಿಯಮಿತ ರಕ್ತದಾನವು ರಕ್ತದಲ್ಲಿ ಅತ್ಯುತ್ತಮ ಕಬ್ಬಿಣಾಂಶದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲೂ ನೆರವಾಗುತ್ತದೆ. ಅಷ್ಟೇ ಅಲ್ಲದೇ ಇದು ಹೃದಯ ಕಾಯಿಲೆ ಮತ್ತು ಕೆಲವು ಕ್ಯಾನ್ಸರ್ ಅಪಾಯವನ್ನು ಕೂಡ ತಗ್ಗಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
18 ರಿಂದ 60 ವರ್ಷ ವಯಸ್ಸಿನ ಆರೋಗ್ಯವಂತರು ರಕ್ತದಾನ ಮಾಡಬಹುದು. 45 ಕೆಜಿ ತೂಕ ಮತ್ತು ಕನಿಷ್ಠ 12.5 ಗ್ರಾಂ/ಡಿಎಲ್ ಹಿಮೋಗ್ಲೋಬಿನ್ ರಕ್ತದಾನದ ಸಮಯದಲ್ಲಿ ಅಗತ್ಯವಿರುತ್ತದೆ.ಜೊತೆಗೆ ರಕ್ತದಾನ ಮಾಡುವವರು ಯಾವುದೇ ಸೋಂಕುಗಳು ಅಥವಾ ಕಾಯಿಲೆಗಳಿಂದ , ದೀರ್ಘಕಾಲದ ಅಸ್ವಸ್ಥತೆಗಳು, ಹೃದಯ ಸಮಸ್ಯೆ ಅಥವಾ ಅಟೋಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿರಬಾರದು. ಕೆಲವು ವೈದ್ಯಕೀಯ ಪರಿಸ್ಥಿತಿಗಳು ರಕ್ತದಾನಕ್ಕೆ ಅವಕಾಶ ನೀಡುವುದಿಲ್ಲ.ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು, ಕೆಲವರು ನಿರ್ದಿಷ್ಟ ಔಷಧಿಗಳನ್ನು ಸೇವಿಸುತ್ತಿರುವವರು ರಕ್ತದಾನ ಮಾಡುವುದು ಸೂಕ್ತವಲ್ಲ.

Leave a Reply

Your email address will not be published. Required fields are marked *

error: Content is protected !!