ಉದಯವಾಹಿನಿ, ಬೆಂಗಳೂರು: ಸಂವಿಧಾನ, ಮತದಾನದ ಹಕ್ಕು ರಕ್ಷಣೆಗೆ ರಾಹುಲ್ ಗಾಂಧಿ ಅವರು ದಿಟ್ಟ ಹೋರಾಟ ಆರಂಭಿಸಿದ್ದಾರೆ. ಅದಕ್ಕೆ ನಮ್ಮೆಲ್ಲರ ಒಕ್ಕೊರಲ ಬೆಂಬಲವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಲೋಕಸಭೆ ಚುನಾವಣೆ ವೇಳೆ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿಯವರ ಆರೋಪ ಸಂಬಂಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶುಕ್ರವಾರ ನಡೆದ ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೊಂದು ಐತಿಹಾಸಿಕ ಹೋರಾಟ. ಮಲ್ಲಿಕಾರ್ಜುನ ಖರ್ಗೆ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಈಗ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಎತ್ತರಕ್ಕೆ ಬೆಳೆದಿದ್ದಾರೆ. ಜೊತೆಗೆ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ. ರಾಹುಲ್ ಗಾಂಧಿ ಅವರು ದೇಶದ ಸಂವಿಧಾನ ರಕ್ಷಣೆಗೆ ನಮ್ಮ ಮತ, ನಮ್ಮ ಹಕ್ಕು ರಕ್ಷಣೆಗೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಈ ಮೂಲಕ ದೇಶದ ಪರವಾಗಿ ದಿಟ್ಟ ಹೋರಾಟ ಆರಂಭಿಸಿದ್ದಾರೆ. ದೇಶಾದ್ಯಂತ ಮತ ಅಕ್ರಮ ಬಯಲಿಗೆಳೆಯಲು ಕರ್ನಾಟಕದಲ್ಲಿ ಮುನ್ನುಡಿ ಬರೆಯುತ್ತಿದ್ದಾರೆ ಎಂದರು.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐಸಿಸಿ ಮಾನವ ಹಕ್ಕು ವಿಭಾಗದ ಸಭೆಯಲ್ಲಿ ರಾಹುಲ್ ಗಾಂಧಿ ಅವರು, ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಣೆ ಮಾಡಲು, ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಇರುವಂತೆ ಪ್ರತಿ ಕ್ಷೇತ್ರದಲ್ಲಿ ಲೀಗಲ್ ಬ್ಯಾಂಕ್ ಸ್ಥಾಪನೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಅವರ ಸೂಚನೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!