ಉದಯವಾಹಿನಿ, ಬೆಂಗಳೂರು: ಚುನಾವಣಾ ಆಯೋಗ ಬಿಜೆಪಿಯ ಬ್ರ‍್ಯಾಂಚ್ ಆಫೀಸ್. ಬಿಜೆಪಿಯ ಮಾತನ್ನು ಕೇಳುವವರೇ ಆಯೋಗದಲ್ಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ರಾಹುಲ್ ಗಾಂಧಿ (Rahul Gandhi) ಈ ವಿಚಾರ ಇಟ್ಟುಕೊಂಡು ಹೋರಾಟ ಮಾಡ್ತಾರೆ. ಬಿಜೆಪಿ ಸದಾ ಅಧಿಕಾರ ಬಯಸುವ ಪಕ್ಷ. ತನಿಖಾ ಸಂಸ್ಥೆಗಳ ಒಬಿಸಿ, ದಲಿತರನ್ನು ಹೆದರಿಸಿ ಬೆದರಿಸಿ ಅಧಿಕಾರ ಪಡೆಯುತ್ತಿದೆ ಎಂದು ದೂರಿದರು.
ಸಂವಿಧಾನ ಉಳಿಯಲು ಇವರು ಮುಂದುವರೆಯಬಾರದು. ಸಂವಿಧಾನದ ರಕ್ಷಣೆಯಲ್ಲಿ ನಮ್ಮೆಲ್ಲರ ರಕ್ಷಣೆ ಇದೆ. ಅಸಮಾನತೆಯನ್ನು ತಡೆದು ಹಾಕುವರೆಗೂ ದೇಶದಲ್ಲಿ ಶಾಂತಿ, ನ್ಯಾಯ, ನೆಮ್ಮದಿ ನೆಲೆಸಲ್ಲ. ಸಾಮಾಜಿಕ ನ್ಯಾಯದಲ್ಲಿ, ಭಾತೃತ್ವದಲ್ಲಿ, ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇರುವರು ಅಧಿಕಾರಕ್ಕೆ ಬಂದರೆ ಮಾತ್ರ ಸಮಾನತೆ ಇರುತ್ತದೆ. ಕಾಂಗ್ರೆಸ್, ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಮಾತ್ರ ಸಮಾನತೆ ಸಿಗಲು ಸಾಧ್ಯ. ಇಡೀ ದೇಶ ರಾಹುಲ್ ಗಾಂಧಿ ನಾಯಕತ್ವ ಬೇಕು ಎಂದು ಬಯಸುತ್ತಿದೆ ಎಂದು ಸಿಎಂ ಹೇಳಿದರು.
ಬಿಜೆಪಿ ಜನರ ಆಶೀರ್ವಾದ ಪಡೆದು ಯಾವತ್ತೂ ಅಧಿಕಾರಕ್ಕೆ ಬಂದಿಲ್ಲ. ಮತ ಕದ್ದು, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು. ಇವಿಎಂ ದುರುಪಯೋಗ, ಮತ ಕಳವು, ಆಪರೇಷನ್ ಕಮಲ ಮೂಲಕ ಬಿಜೆಪಿ ರಾಜ್ಯದಲ್ಲೂ, ದೇಶದಲ್ಲೂ ಅಧಿಕಾರಕ್ಕೆ ಬಂದಿದೆ. ಕಳೆದ ಲೋಕಸಭೆಯಲ್ಲಿ ಮೋದಿಯವರ ಬಿಜೆಪಿ ಬಹುಮತ ಪಡೆದಿರಲಿಲ್ಲ, ಅನೇಕ ಕಡೆ ಅಕ್ರಮ ಮಾಡಿದ್ದಾರೆ. ಹೀಗಾಗಿ ಮೋದಿಯವರು ಕೂಡಲೇ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಎದುರಿಸಿ ಜನರ ಆಶೀರ್ವಾದ ಪಡೆದು ಗೆದ್ದು ಬರಲಿ ಎಂದು ಸವಾಲು ಹಾಕಿದರು.
