ಉದಯವಾಹಿನಿ, ಬೀದರ್: ಅಂಗಡಿಯೊಂದರಲ್ಲಿ ಖದೀಮರು ಕಳ್ಳತನ ಮಾಡಿ, ಬಳಿಕ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಬೀದರ್ ನಗರದ ನ್ಯೂ ಆದರ್ಶ ಕಾಲೋನಿಯಲ್ಲಿ ನಡೆದಿದೆ. ಪೃಥ್ವಿರಾಜ್ ಮಡಿವಾಳರ್ ಅವರಿಗೆ ಸೇರಿದ್ದ ಸ್ಟುಡಿಯೋ ಹಾಗೂ ಅದರ ಪಕ್ಕದಲ್ಲಿರುವ ಸೀಮನ್ ಅವರಿಗೆ ಸೇರಿದ್ದ ಬೇಕರಿಯಲ್ಲಿ ಕಳ್ಳತನ ಮಾಡಿದ್ದಾರೆ. ಈ ವೇಳೆ 70 ಸಾವಿರ ರೂ. ನಗದು, ಒಂದು ಐಪೋನ್, ಎರಡು ಕ್ಯಾಮೆರಾವನ್ನು ಕದ್ದುಕೊಂಡು ಹೋಗಿದ್ದಾರೆ. ಕಳ್ಳತನದ ಬಳಿಕ ಸ್ಟುಡಿಯೋಗೆ ಬೆಂಕಿ ಹಚ್ಚಿದ್ದು, 15 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.ಅದೇ ಬೆಂಕಿ ಪಕ್ಕದ ಬೇಕರಿಗೆ ಹರಡಿಕೊಂಡು ಅದರಲ್ಲಿದ್ದ ಫ್ರಿಡ್ಜ್ ಸೇರಿದಂತೆ 8 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
