ಉದಯವಾಹಿನಿ, ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ತಲೈವಾ ರಜನಿಕಾಂತ್‌ ಚಿತ್ರಗಳೆಂದರೆ ಸಾಕು ಅಲ್ಲೊಂದು ಹವಾ ಎದ್ದಿರುತ್ತದೆ. ಸಿನಿಮಾ ಘೋಷಣೆಯಾದಾಗಲೇ ಕುತೂಹಲ ಗರಿಗೆದರುತ್ತದೆ. ಸದ್ಯ ಅಂತಹದ್ದೊಂದು ನಿರೀಕ್ಷೆ ಹುಟ್ಟುಹಾಕಿರುವ ಚಿತ್ರ ʼಕೂಲಿʼ (Coolie Movie). ವಿಭಿನ್ನ ಸಿನಿಮಾಗಳ ಮೂಲಕವೇ ಕಾಲಿವುಡ್‌ನಲ್ಲಿ ಗಮನ ಸೆಳೆದ ನಿರ್ದೇಶಕ ಲೋಕೇಶ್‌ ಕನಗರಾಜ್‌ (Lokesh Kanagaraj) ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರ ಆಗಸ್ಟ್‌ 14ರಂದು ತೆರೆಗೆ ಬರಲಿದೆ. ಸಿನಿಮಾದ ಫಸ್ಟ್‌ ಡೇ ಫಸ್ಟ್‌ ಶೋ ನೋಡಬೇಕೆಂದು ರಜನಿಕಾಂತ್‌ ಅವರ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಮಧ್ಯೆ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ಬಂಪರ್‌ ಆಫರ್‌ ಕೊಟ್ಟಿದೆ. ವೇತನ ಸಹಿತ ರಜೆಯ ಘೋಷಣೆ ಜತೆಗೆ ʼಕೂಲಿʼ ಚಿತ್ರದ ಟಿಕೆಟ್‌ ನೀಡಿದೆ.

ಈಗಾಗಲೇ ʼಕೂಲಿʼ ಸಿನಿಮಾದ ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಟಿಕೆಟ್‌ಗಳು ದಾಖಲೆ ಪ್ರಮಾಣದಲ್ಲಿ ಬಿಕರಿಯಾಗುತ್ತಿವೆ. ಇದರೊಂದಿಗೆ ಮಧುರೈ ಮೂಲದ ಕಂಪೆನಿಯೊಂದು ಅಚ್ಚರಿಯ ತೀರ್ಮಾನ ತೆಗೆದುಕೊಂಡಿದೆ.

ರಜೆ ಜತೆ ಉಚಿತ ಟಿಕೆಟ್‌
ರಜನಿಕಾಂತ್‌ ಅವರ ಬಹುದೊಡ್ಡ ಅಭಿಮಾನಿಯಾಗಿರುವ ಯುನೊ ಅಕ್ವಾ ಕೇರ್‌ (Uno Aqua Care)ನ ಮಾಲಕರು ಆಗಸ್ಟ್‌ 14ರಂದು ಅಧಿಕೃತ ರಜೆ ಘೋಷಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರಜೆ ಮನವಿ ಬರುವ ಸಾಧ್ಯತೆವಿರುವ ಹಿನ್ನೆಲೆಯಲ್ಲಿ ಕಂಪೆನಿ ಈ ನಿರ್ಧಾರ ತೆಗೆದುಕೊಂಡಿದೆಯಂತೆ. ಉದ್ಯೋಗಿಗಳು ಯಾವುದೇ ಅಡೆ ತಡೆ ಇಲ್ಲದೆ ಸಿನಿಮಾ ನೋಡಲಿ ಎನ್ನುವ ಉದ್ದೇಶವನ್ನೂ ಕಂಪೆನಿ ಹೊಂದಿದೆ. ಕಂಪೆನಿ ಚೆನ್ನೈ, ಬೆಂಗಳೂರು, ತಿರುಚ್ಚಿ, ತಿರುನಲ್ವೇಲಿ, ಚೆಂಗಲಪಟ್ಟು, ಮಟ್ಟುತವಾಣಿ ಮತ್ತು ಅರಪಾಲಯಂನಲ್ಲಿ ಬ್ರ್ಯಾಂಚ್‌ ಹೊಂದಿದ್ದು, ಎಲ್ಲ ಕಡೆಯೂ ರಜೆ ಘೋಷಿಸಲಾಗಿದೆ.

ಕಂಪೆನಿಯ ಪ್ರಕಟಣೆಯಲ್ಲಿ ಏನಿದೆ?
ಕಂಪೆನಿಯು ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದೆ. ʼʼಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ʼಕೂಲಿʼ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್‌ 14ರಂದು ಉದ್ಯೋಗಿಗಳಿಗೆ ರಜೆ ನೀಡಲಾಗಿದೆ. ಎಚ್‌ಆರ್‌ ಡಿಪಾರ್ಟ್‌ಮೆಂಟ್‌ಗೆ ಬರಬಹುದಾದ ರಜೆಯ ಅರ್ಜಿಯ ಮನವಿಯ ಪ್ರವಾಹವನ್ನು ಕಡಿಮೆ ಮಾಡುವ ಉದ್ದೇಶವನ್ನು ಇದು ಹೊಂದಿದೆ. ಜತೆಗೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಆಹಾರ ವಿತರಿಸುವ ಮೂಲಕ ರಜನಿಸಂನ 50ನೇ ವರ್ಷವನ್ನು ಕೊಂಡಾಡಲು ತೀರ್ಮಾನಿಸಿದ್ದೇವೆ. ಉದ್ಯೋಗಿಗಳಿಗೆ ಚಿತ್ರದ ಉಚಿತ ಟಿಕೆಟ್‌ ಕೂಡ ಹಂಚುತ್ತಿದ್ದೇವೆʼʼ ಎಂದು ಬರೆದುಕೊಂಡಿದೆ.

ಈಗಾಗಲೇ ʼಕೂಲಿʼ ಸಿನಿಮಾ ಅಡ್ವಾನ್ಸ್‌ ಬುಕ್ಕಿಂಗ್‌ ಮೂಲಕ ಭಾರತದಲ್ಲಿ 10.27 ಕೋಟಿ ರೂ. ಮತ್ತು ಜಾಗತಿಕವಾಗಿ 37 ಕೋಟಿ ರೂ. ಗಳಿಸಿದೆ. ಈ ವರ್ಷದ ಬ್ಲಾಕ್‌ ಬಸ್ಟರ್‌ ಸಿನಿಮಾವಾಗಿ ʼಕೂಲಿʼ ಹೊರಹೊಮ್ಮುವ ಎಲ್ಲ ಸಾಧ್ಯತೆ ಕಂಡು ಬಂದಿದೆ. ಮೊದಲ ದಿನದ ಕಲೆಕ್ಷನ್‌ 100 ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ.

ಬಹುತಾರಾಗಣದ ಮೂಲಕ ಗಮನ ಸೆಳೆದಿರುವ ʼಕೂಲಿʼ ಚಿತ್ರದ ಮೂಲಕ ಕನ್ನಡತಿ ರಚಿತಾ ರಾಮ್‌ ಕಾಲಿವುಡ್‌ಗೆ ಕಾಲಿಡುತ್ತಿರುವುದು ವಿಶೇಷ. ನಾಗಾರ್ಜುನ್‌, ಉಪೇಂದ್ರ, ಶ್ರುತಿ ಹಾಸನ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ಆಮೀರ್‌ ಖಾನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪೂಜಾ ಹೆಗ್ಡೆ ವಿಶೇಷ ಹಾಡಿಗೆ ಸೊಂಟ ಬಳುಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!