ಉದಯವಾಹಿನಿ, ಹಾಂಕಾಂಗ್: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಇಂದು 19ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಸಂಘರ್ಷದ ನಡುವೆಯೂ ಇದುವರೆಗೆ ತೈಲ ಟ್ಯಾಂಕರ್‌ಗಳು ಸೇರಿದಂತೆ ಸುಮಾರು 90 ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಸಮುದ್ರ ಮತ್ತು ವ್ಯಾಪಾರ ದತ್ತಾಂಶ ವೇದಿಕೆಗಳ ಪ್ರಕಾರ, ಈ ಜಲಮಾರ್ಗವು ಮುಚ್ಚಲ್ಪಟ್ಟಿದ್ದರೂ ಸಹ ಲಕ್ಷಾಂತರ ಬ್ಯಾರೆಲ್‌ಗಳಷ್ಟು ತೈಲ ರಫ್ತು ಮುಂದುವರೆದಿದೆ.
ಜಲಸಂಧಿಯ ಮೂಲಕ ಹಾದುಹೋದ ಅನೇಕ ಹಡಗುಗಳು ತಮ್ಮ ಗುರುತು ಬಹಿರಂಗಪಡಿಸದೆ ‘ಡಾರ್ಕ್’ ಸಾಗಾಟದ (dark transits) ಮೂಲಕ ಪ್ರಯಾಣಿಸಿವೆ ಎಂದು ಸಮುದ್ರ ದತ್ತಾಂಶ ಸಂಸ್ಥೆ ಲಾಯ್ಡ್ಸ್ ಲಿಸ್ಟ್ ಇಂಟೆಲಿಜೆನ್ಸ್ ಹೇಳಿದೆ. ಇತ್ತೀಚೆಗೆ, ಸರ್ಕಾರಗಳ ಮಾತುಕತೆ ಬಳಿಕ ಭಾರತ ಮತ್ತು ಪಾಕಿಸ್ತಾನದ ಹಡಗುಗಳು ಸಹ ಯಶಸ್ವಿಯಾಗಿ ಜಲಸಂಧಿ ದಾಟಿವೆ.ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 100 ಡಾಲರ್ಗೂ ದುಬಾರಿಯಾದ ಬೆನ್ನಲ್ಲೇ, ತೈಲ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯುದ್ಧನೌಕೆಗಳನ್ನು ಕಳುಹಿಸಲು ಮತ್ತು ಜಲಸಂಧಿಯನ್ನು ಮತ್ತೆ ತೆರೆಯುವಂತೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿತ್ರರಾಷ್ಟ್ರಗಳು ಮತ್ತು ವ್ಯಾಪಾರ ಪಾಲುದಾರರ ಮೇಲೆ ಒತ್ತಡ ಹೇರಿದ್ದರು.
ಹಾರ್ಮುಜ್ ಜಲಸಂಧಿಯು ವಿಶ್ವದ ಕಚ್ಚಾ ತೈಲದ ಸರಿಸುಮಾರು ಐದನೇ ಒಂದು ಭಾಗದಷ್ಟು ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಜಲಮಾರ್ಗವಾಗಿದೆ. ಯುದ್ಧ ಆರಂಭವಾದ ಬಳಿಕ ಮಾರ್ಚ್ ಆರಂಭದಿಂದಲೇ ಇಲ್ಲಿಂದ ಹೆಚ್ಚಿನ ಹಡಗು ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ, ಈ ಪ್ರದೇಶದಲ್ಲಿ ಸುಮಾರು 20 ಹಡಗುಗಳು ದಾಳಿಗೆ ತುತ್ತಾಗಿವೆ.ಆದರೆ, ಯುದ್ಧದ ನಡುವೆಯೂ ಮಾರ್ಚ್ ಆರಂಭದಿಂದಲೂ ಇರಾನ್ 16 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚು ತೈಲವನ್ನು ರಫ್ತು ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ವ್ಯಾಪಾರ ದತ್ತಾಂಶ ಮತ್ತು ವಿಶ್ಲೇಷಣಾ ವೇದಿಕೆ ಕೆಪ್ಲರ್ ಅಂದಾಜಿಸಿದೆ. ಪಾಶ್ಚಿಮಾತ್ಯ ನಿರ್ಬಂಧ ಮತ್ತು ಅಪಾಯಗಳ ಮಧ್ಯೆ ಚೀನಾವು ಇರಾನ್ನಿಂದ ಅತಿದೊಡ್ಡ ಪ್ರಮಾಣದಲ್ಲಿ ತೈಲ ಖರೀದಿ ಮಾಡಿದೆ.
ಇರಾನ್‌ನ ತೈಲ ರಫ್ತು ಪ್ರಮಾಣದಲ್ಲಿ ನಿರಂತರ ಸ್ಥಿರತೆ ಕಂಡುಬಂದಿದೆ ಎಂದು ಕೆಪ್ಲರ್ ವ್ಯಾಪಾರ ಅಪಾಯ ವಿಶ್ಲೇಷಕ ಅನಾ ಸುಬಾಸಿಕ್ ಹೇಳಿದ್ದಾರೆ. ತೈಲ ಮಾರಾಟದಿಂದ ಲಾಭ ಗಳಿಸುವಲ್ಲಿ ಇರಾನ ಯಶಸ್ವಿಯಾಗಿದೆ. ಚಾಕ್‌ಪಾಯಿಂಟ್ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ತನ್ನದೇ ಆದ ರಫ್ತನ್ನು ಸಂರಕ್ಷಿಸಿಕೊಂಡಿದೆ ಎಂದು ಸಲಹಾ ಸಂಸ್ಥೆ ರೆಡ್ಡಲ್‌ನ ಕ್ಲೈಂಟ್ ನಿರ್ದೇಶಕ ಕುನ್ ಕಾವೊ ತಿಳಿಸಿದ್ದಾರೆ.
ಲಾಯ್ಡ್ಸ್ ಲಿಸ್ಟ್ ಇಂಟೆಲಿಜೆನ್ಸ್ ಪ್ರಕಾರ, ಮಾರ್ಚ್ 1 ಮತ್ತು 15ರ ನಡುವೆ ಕನಿಷ್ಠ 89 ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಯುದ್ಧಕ್ಕೂ ಮುನ್ನ ದಿನಕ್ಕೆ ಸರಿಸುಮಾರು 100ರಿಂದ 135 ಹಡಗುಗಳು ತೆರಳುತ್ತಿದ್ದವು. ಈ 89 ಹಡಗುಗಳಲ್ಲಿ ಐದನೇ ಒಂದು ಭಾಗಕ್ಕಿಂತ ಹೆಚ್ಚು ಹಡಗುಗಳು ಇರಾನ್‌ಗೆ ಸೇರಿವೆ ಎನ್ನಲಾಗಿದೆ. ಉಳಿದವು ಚೀನಾ ಮತ್ತು ಗ್ರೀಸ್ಗೆ ಸೇರಿದ ಹಡಗುಗಳಾಗಿವೆ ಎಂದು ಹೇಳಿದೆ.ಪಾಕಿಸ್ತಾನ ರಾಷ್ಟ್ರೀಯ ಶಿಪ್ಪಿಂಗ್ ಕಾರ್ಪೊರೇಷನ್ನ ಪಾಕಿಸ್ತಾನ ಧ್ವಜ ಹೊಂದಿರುವ ಕಚ್ಚಾ ತೈಲ ಟ್ಯಾಂಕರ್ ‘ಕರಾಚಿ’ ಭಾನುವಾರ ಜಲಸಂಧಿಯ ಮೂಲಕ ಹಾದುಹೋಗಿದೆ ಎಂದು ಲಾಯ್ಡ್ಸ್ ಲಿಸ್ಟ್ ಇಂಟೆಲಿಜೆನ್ಸ್ ತಿಳಿಸಿದೆ. ಪಾಕಿಸ್ತಾನ ಬಂದರು ಟ್ರಸ್ಟ್‌ನ ವಕ್ತಾರ ಶಾರಿಕ್ ಅಮೀನ್, ಎಂಟಿ ಕರಾಚಿ ಯಾವ ಮಾರ್ಗದ ಮೂಲಕ ಬರುತ್ತಿದೆ ಎಂಬುದನ್ನು ಖಚಿತಪಡಿಸಲು ನಿರಾಕರಿಸಿದ್ದಾರೆ. ಆದರೆ, ಹಡಗು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಸುರಕ್ಷಿತವಾಗಿ ತಲುಪಲಿದೆ ಎಂದು ಹೇಳಿದ್ದಾರೆ.
