ಉದಯವಾಹಿನಿ, ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಪದೇ ಪದೇ ಭೇಟಿ ನೀಡುತ್ತಲೇ ಇರುತ್ತಾರೆ. ಈ ಎರಡೂ ಕ್ಷೇತ್ರಗಳ ಪರಮ ಭಕ್ತೆ ಅವರು. ದೇವಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಂಪ್ರದಾಯದಂತೆ ಹಣೆಯ ತುಂಬ ಅರಿಶಿಣ ಮೆತ್ತಿ ಅದರ ಮೇಲೆ ವಿಭೂತಿ ಧರಿಸಿ, ಕೊರಳಿಗೆ ಹಾರ ಧರಿಸಿ ದೇವರ ದರ್ಶನ ಮಾಡುತ್ತಾರೆ. ಕೇದಾರನಾಥ, ಬದ್ರಿನಾಥ ಕ್ಷೇತ್ರಕ್ಕೆ ಭೇಟಿ ನೀಡಿದರೆ ತಮಗೆ ನೆಮ್ಮದಿ ಸಿಗುತ್ತದೆ ಎಂದು ಹಲವು ಬಾರಿ ಅವರು ಹೇಳಿಕೊಂಡಿದ್ದಾರೆ. ಆದರೆ ಇನ್ನು ಮುಂದೆ ಸಾರಾ ಅಲಿ ಖಾನ್​​ಗೆ ಕೇದಾರನಾಥ ಮತ್ತು ಬದ್ರಿನಾಥ ದೇವಾಲಯಕ್ಕೆ ಪ್ರವೇಶ ಇರುವುದಿಲ್ಲ. ಹೀಗೆಂದು ಸ್ವತಃ ಬದ್ರಿನಾಥ-ಕೇದಾರ್​​ನಾಥ ಸಮಿತಿಯ ಅಧ್ಯಕ್ಷರು ಹೇಳಿದ್ದು, ಒಂದೊಮ್ಮೆ ಸಾರಾ ಅಲಿ ಖಾನ್ ದೇವಾಲಯಕ್ಕೆ ಬರಬೇಕೆಂದರೆ ಅಫಿಡವಿಟ್ ಸಲ್ಲಿಕೆ ಮಾಡಬೇಕು ಎಂದಿದ್ದಾರೆ.

ಬದ್ರಿನಾಥ-ಕೇದಾರ್​​ನಾಥ ದೇವಾಲಯ ಸಮಿತಿಯು ದೇವಾಲಯಕ್ಕೆ ಆಗಮಿಸುವ ಭಕ್ತರ ಕುರಿತಾಗಿ ಹೊಸ ನಿಯಮ ಜಾರಿಗೆ ತಂದಿದ್ದು, ಹಿಂದೂಯೇತರರು ಕಡ್ಡಾಯವಾಗಿ ದೇವಾಲಯಕ್ಕೆ ಪ್ರವೇಶಿಸುವಂತಿಲ್ಲ ಎಂದಿದ್ದಾರೆ. ಒಂದೊಮ್ಮೆ ದೇವಾಲಯಕ್ಕೆ ಪ್ರವೇಶಿಸುವುದೇ ಆದರೆ ಅವರು ತಾವು ಹಿಂದೂ ಧರ್ಮದಲ್ಲಿ ನಂಬಿಕೆ ಇರಿಸುತ್ತಿದ್ದು, ಹಿಂದೂ ಧರ್ಮವನ್ನು ಆಚರಿಸುವುದಾಗಿ ಅಫಿಡವಿಟ್ ಅನ್ನು ದೇವಾಲಯದ ಆಡಳಿತದ ಬಳಿ ಸಲ್ಲಿಕೆ ಮಾಡಿ ಬಳಿಕವಷ್ಟೆ ಅವರು ದೇವಾಲಯಕ್ಕೆ ತೆರಳಬೇಕಾಗಿದೆ. ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಈ ನಿಯಮ ಮಾಡಿರುವುದಾಗಿ ಅವರು ಹೇಳಿದ್ದಾರೆ. ದೇವಾಲಯದ ಸಮಿತಿಯ ವ್ಯಾಪ್ತಿಯಲ್ಲಿರುವ 47 ದೇವಾಲಯಗಳಲ್ಲಿಯೂ ಇದೇ ನಿಯಮ ಪಾಲಿಸಲಾಗುವುದು ಎಂದಿದ್ದಾರೆ ಅವರು.

Leave a Reply

Your email address will not be published. Required fields are marked *

error: Content is protected !!