ಉದಯವಾಹಿನಿ, ಬೆಂಗಳೂರು: ಸಚಿವ ಸಂಪುಟದಿಂದ ಕೆ.ಎನ್ ರಾಜಣ್ಣ ಅವರನ್ನು ವಜಾಗೊಳಿಸಿದ ವಿಷಯವಾಗಿ ವಿಧಾನ ಪರಿಷತ್ ಕಲಾಪದಲ್ಲಿಂದು ಗದ್ದಲ-ಗಲಾಟೆ ನಡೆಯಿತು.
ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡುತ್ತಾ, ಸಹಕಾರಿ ಸಚಿವರಾಗಿದ್ದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸಹಿಯಿರುವ ಪತ್ರವನ್ನು ಓದಲು ಮುಂದಾದರು. ಇದಕ್ಕೆ ಆಡಳಿತ ಪಕ್ಷದ ಸಚೇತಕ ಸಲೀಂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಮಾತನಾಡಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು. ತುರ್ತು ವಿಷಯವಾಗಿದ್ದು, ರಾಜಣ್ಣ ಅವರನ್ನ ಸಚಿವ ಸ್ಥಾನದಿಂದ ಯಾಕೆ ವಜಾ ಮಾಡಿದ್ದು ಎಂದು ಪ್ರಶ್ನಿಸಿದರು. ಇದಕ್ಕೆ ಸಿ.ಟಿ.ರವಿ, ರವಿಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಧ್ವನಿಗೂಡಿಸಿದರು.

ಪಕ್ಷ ಸದಸ್ಯರ ಮಾತಿಗೆ ವಿರೋಧಿಸಿದ ಆಡಳಿತ ಪಕ್ಷದ ನಾಯಕರು, ರಾಜಣ್ಣ ಅವರ ಮೇಲೆ ಯಾವತ್ತಿನಿಂದ ಪ್ರೀತಿ ಬಂತು ಎಂದು ವ್ಯಂಗ್ಯವಾಡಿದರು. ಸದನದಲ್ಲಿ ಗದ್ದಲ, ಗಲಾಟೆ ಆಗಿದ್ದರಿಂದ ಸಭಾಪತಿ ಅವರು ಕಲಾಪವನ್ನು 10 ನಿಮಿಷ ಮುಂದೂಡಿದರು.ಬಳಿಕ ಕಲಾಪ ಪ್ರಾರಂಭವಾದ ಮೇಲೆ ಮತ್ತೆ ವಿಷಯ ಪ್ರಸ್ತಾಪ ಮಾಡೋದಕ್ಕೆ ಛಲವಾದಿ ನಾರಾಯಣಸ್ವಾಮಿ ಮುಂದಾದರು. ಆಗ ಸಭಾಪತಿಗಳು ಪ್ರಶ್ನೋತ್ತರ ಮುಗಿದ ಮೇಲೆ ಸಭಾ ನಾಯಕರಿಂದ ಉತ್ತರ ಕೊಡಿಸೋದಾಗಿ ತಿಳಿಸಿದರು. ಶೂನ್ಯವೇಳೆ ಬಳಿಕ ಛಲವಾದಿ ನಾರಾಯಣಸ್ವಾಮಿ ವಿಷಯ ಪ್ರಸ್ತಾಪಿಸಿದರು. ರಾಜಣ್ಣರನ್ನ ಯಾಕೆ ವಜಾಗೊಳಿಸಿದರು? ಇದಕ್ಕೆ ಕಾರಣ ಕೊಡಬೇಕು. ರಾಜಣ್ಣ ಭ್ರಷ್ಟಾಚಾರ ಮಾಡಿದ್ರಾ? ಮಾಡಬಾರದ ಹೀನ ಕೆಲಸ ಮಾಡಿದ್ದಕ್ಕೆ ವಜಾ ಮಾಡಿದ್ರಾ? ಸುರ್ಜೇವಾಲಾ ವಿರುದ್ಧ, ಡಿಕೆಶಿ ಬಗ್ಗೆ ಮಾತಾಡಿದ್ದಕ್ಕಾ? 5 ಡಿಸಿಎಂ ಹುದ್ದೆ ಸೃಷ್ಟಿ ಮಾಡಿ ಅಂದಿದ್ದಕ್ಕಾ? ಮತಗಳ್ಳತನ ಬಗ್ಗೆ ರಾಜಣ್ಣ ಮಾತಾಡಿದ್ದಕ್ಕಾ? ಸತ್ಯ ಹೇಳಿದ್ದಕ್ಕೆ ಇದು ಶಿಕ್ಷೆನಾ? ಸತ್ಯ ಹೇಳಿದ್ದಕ್ಕೆ ಇದು ಹತ್ಯೆನಾ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!