ಉದಯವಾಹಿನಿ, ಬೆಂಗಳೂರು: ರಾಜಧಾನಿ ಬೆಂಗಳೂರು 79ನೇ ಸ್ವಾತಂತ್ರ‍್ಯೋತ್ಸವ ಆಚರಣೆಗೆ ಸಿದ್ಧಗೊಳ್ಳತ್ತಿದ್ದು, ಮಾಣಿಕ್ ಷಾ ಮೈದಾನ ಸಜ್ಜುಗೊಂಡಿದೆ. ಇದೇ ಮೊದಲ ಬಾರಿಗೆ ಮಾಣಿಕ್ ಷಾ ಪರೇಡ್ ವೀಕ್ಷಣೆಗೆ ಸಿಲಿಕಾನ್ ಸಿಟಿ ಜನರಿಗೆ ಸುವರ್ಣಾವಕಾಶ ಸಿಗುತ್ತಿದೆ.
ಈ ಬಾರಿಯ ರಾಜ್ಯಮಟ್ಟದ ಸ್ವಾತಂತ್ರ‍್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಮಾಣಿಕ್ ಷಾ ಮೈದಾನ ಸಜ್ಜುಗೊಂಡಿದೆ. ಬಿಬಿಎಂಪಿ, ಬೆಂಗಳೂರು ಪೋಲಿಸ್ ಇಲಾಖೆ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಡಿದ್ದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವರ್ಷ ಅಂದಾಜು ಎಂಟು ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಇಂದು ಮಾಣಿಕ್ ಷಾ ಗ್ರೌಂಡ್‌ನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ, ಮಹೇಶ್ವರ್ ರಾವ್, ಪೋಲಿಸ್ ಕಮೀಷನರ್ ಸೀಮಂತ್ ಕುಮಾರ್ ಹಾಗೂ ಬೆಂಗಳೂರು ನಗರ ಡಿಸಿ ಜಗದೀಶ್ ಜಂಟಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಬಿಬಿಎಂಪಿ ಕಮೀಷನರ್ ಮಹೇಶ್ವರ್ ರಾವ್, ಮಳೆ ಬಂದರೆ ತೊಂದರೆಯಾಗದಂತೆ ಶಾಮಿಯಾನ, ವೇದಿಕೆಯ ನಿರ್ಮಾಣ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಸ್ವಾತಂತ್ರ‍್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು. ಈ ವರ್ಷ ಪ್ರಪ್ರಥಮ ಬಾರಿಗೆ ಎರಡು ಸಾವಿರ ಜನರಿಗೆ ಇ-ಪಾಸ್ ವ್ಯವಸ್ಥೆ ಮಾಡಲಾಗಿದೆ. ಈ ಪಾಸ್ ಅನ್ನು ಸೇವಾಸಿಂಧು ಪೋರ್ಟಲ್ ಮೂಲಕ ಪಡೆದು, ಗೇಟ್ ನಂಬರ್ 5ರ ಮೂಲಕ ಎಂಟ್ರಿ ಕೊಡಬಹುದು ಎಂದರು.
