ಉದಯವಾಹಿನಿ, ನವದೆಹಲಿ: ಸಣ್ಣ ಪ್ರಮಾಣದ ಉಕ್ಕು ಉತ್ಪಾದಿತ ಕ್ಷೇತ್ರವು ರಾಷ್ಟ್ರದ ಅಭಿವೃದ್ಧಿಯ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದೆ. 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಮತ್ತು 2047ರ ವೇಳೆಗೆ 500 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಕಾರ್ಯಸೂಚಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆಯ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳ ಸವಾಲುಗಳ ಕುರಿತು ಉಕ್ಕು ಸಚಿವಾಲಯ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಉಕ್ಕು ವಲಯದ ಒಟ್ಟು ಉತ್ಪಾದನೆಯ 50%ರಷ್ಟನ್ನು ಉತ್ಪಾದಿಸುತ್ತಿರುವ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಈ ವಲಯಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಸಣ್ಣ ಗಾತ್ರದ ಉಕ್ಕು ವಲಯವು ಕೇವಲ ಒಂದು ಉದ್ಯಮವಲ್ಲ. ಇದು ದೇಶಿಯ ಕೈಗಾರೀಕರಣದ ಬೆನ್ನೆಲುಬು. ಇದು ಸ್ಥಳೀಯ ಆರ್ಥಿಕತೆಗೆ ಶಕ್ತಿ ನೀಡುತ್ತಿದೆ ಹಾಗೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದೆ.
