ಉದಯವಾಹಿನಿ,ಶಿವಮೊಗ್ಗ: ಪ್ರತಿ ಮನೆಗೆ ಗರಿಷ್ಠ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ‘ಗೃಹ ಜ್ಯೋತಿ’ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಆದರೆ ಸರ್ವರ್ ಸಮಸ್ಯೆ ಅವರ ಉತ್ಸಾಹಕ್ಕೆ ತಣ್ಣೀರೆರಚಿದೆ. ಇದರಿಂದ ಕರ್ನಾಟಕ ಒನ್, ಶಿವಮೊಗ್ಗ ಒನ್, ಗ್ರಾಮ ಒನ್, ಮೆಸ್ಕಾಂ ಕಚೇರಿ ಎದುರು ಜನರು ಹಗಲಿಡೀ ಕಾಯುತ್ತಾ ನಿಲ್ಲುತ್ತಿದ್ದಾರೆ. ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಗೃಹ ಜ್ಯೋತಿ ಯೋಜನೆಯೂ ಒಂದು. ಇದರ ಫಲಾನುಭವಿಯಾಗಲು ಯಾವುದೇ ಆರ್ಥಿಕ ಮಾನದಂಡದ ಅಗತ್ಯವಿಲ್ಲ. ಆದ್ದರಿಂದ ಜಿಲ್ಲೆಯ ಬಹುತೇಕ ಕುಟುಂಬಗಳು ಯೋಜನೆಯ ಲಾಭ ಪಡೆಯಲು ಅರ್ಹವಾಗಿವೆ.
ದಿನದಿಂದ ದಿನಕ್ಕೆ ಫಲಾನುಭವಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಗೃಹಜ್ಯೋತಿ ಯೋಜನೆಗೆ ವಿದ್ಯುತ್ ಬಳಕೆದಾರರು ಸೇವಾ ಸಿಂಧು ಪೋರ್ಟಲ್ ಮೂಲಕ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ಆದರೆ ಕಳೆದ 3-4 ದಿನಗಳಿಂದ ಸೇವಾ ಸಿಂಧು ವೆಬ್ ಪೋರ್ಟಲ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅದರ ಜೊತೆಗೆ ಆಧಾರ್ ಕೆವೈಸಿ ಮಾಡಿಸಲೂ ಕೂಡ ಸಮಸ್ಯೆ ಆಗಿದೆ. ಇದು ನಾಗರಿಕರ ಬೇಸರಕ್ಕೆ ಕಾರಣವಾಗಿದೆ. ‘ಸರ್ಕಾರ ಜನ ಸಾಮಾನ್ಯರ ಉಪಯೋಗಕ್ಕೆ ಗೃಹ ಜ್ಯೋತಿ ಯೋಜನೆ ಘೋಷಣೆ ಮಾಡಿದೆ. ಆದರೆ ಅದರ ನಿರ್ವಹಣೆಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಆಗ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ತಾಂತ್ರಿಕ ಸಮಸ್ಯೆ ಆದರೆ ದೈನಂದಿನ ಕಾರ್ಯ ಬಿಟ್ಟು ಕಚೇರಿಗಳ ಬಾಗಿಲಲ್ಲಿ ಕಾಯುವುದೆಂದರೆ ಕಷ್ಟ’ ಎಂದು ವಿನೋಬನಗರದ ರೋಹಿಣಿ ಹೇಳುತ್ತಾರೆ.
