ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳಿಗೆ ಜನತೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು. ವ್ಯಾಯಾಮ, ಪ್ರಾಣಾಯಾಮ, ಆಹಾರಪದ್ಧತಿ ಹಾಗೂ ಜೀವನ ಶೈಲಿಯನ್ನು ಬದಲಾವಣೆ ಮಾಡಿದರೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಜನತೆಗೆ ಧೈರ್ಯ ತುಂಬಿದ್ದಾರೆ. ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆ ಉತ್ತರಿಸಿದ ಅವರು, ಇತ್ತೀಚೆಗೆ ಹೃದಯಾಘಾತ, ಪ್ರಕರಣಗಳ ಸಂಖ್ಯೆ ಹೆಚ್ಚಳದ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಜಯದೇವ ಆಸ್ಪತ್ರೆಯಲ್ಲಿ ಜನರು ಪ್ರತಿನಿತ್ಯ ಬಂದು ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಪ್ರಮಾಣ ಶೇ.25ರಷ್ಟು ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ಹೃದಯಘಾತಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. ಇದು ತಪ್ಪು ಗ್ರಹಿಕೆ. ವಾಸ್ತವವಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸರಾಸರಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶೇ.5ರಿಂದ 6ರಷ್ಟು ಪ್ರಕರಣಗಳು ಹೃದಯಾಘಾತಕ್ಕೆ ಸಂಬಂಧಿಸಿದವು. ಈ ವರ್ಷವು ಇಷ್ಟೇ ಪ್ರಮಾಣದಲ್ಲಿ ಇದೆ ಎಂದು ಹೇಳಿದರು. ಬದಲಾದ ಜೀವನಶೈಲಿ, ಅಧಿಕ ಒತ್ತಡ, ಬೊಜ್ಜು, ಮದ್ಯಪಾನ, ಧೂಮಪಾನ, ಡ್ರಗ್‌್ಸ ಸೇವನೆ, ಕುಟುಂಬದ ಹಿನ್ನಲೆ ಇತ್ಯಾದಿ ಕಾರಣಗಳಿಂದ ಹೃದಯಘಾತಗಳು ಸಂಭವಿಸಿವೆ. ಯಾವುದೋ ಒಂದು ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಜನತೆ ಆತಂಕಕ್ಕೆ ಒಳಗಾಗಬಾರದು ಎಂದು ಸಲಹೆ ಮಾಡಿದರು.
