ಉದಯವಾಹಿನಿ, ಬೆಂಗಳೂರು: ಎಸ್‌ಸಿ (SC) ಸಮುದಾಯದ 101 ಜಾತಿಗಳಿದ್ದು, ಒಳ ಮೀಸಲಾತಿ ಜಾರಿ ಮಾಡುವಾಗ ಯಾವುದೇ ಜಾತಿಗೆ ಅನ್ಯಾಯ ಆಗದಂತೆ ನಿರ್ಣಯ ತೆಗೆದುಕೊಳ್ಳಿ ಎಂದು ಶಾಸಕ ಬಿವೈ ವಿಜಯೇಂದ್ರ ( ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೀವು ರಾಜ್ಯದ ಮುಖ್ಯಮಂತ್ರಿಗಳು. ಒಳ ಮೀಸಲಾತಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಎಸ್‌ಸಿ ಸಮುದಾಯದ 101 ಜಾತಿಗಳಿದ್ದು, ಯಾವುದೇ ಜಾತಿಗೆ ಅನ್ಯಾಯ ಆಗದಂತೆ ನಿರ್ಣಯ ತೆಗೆದುಕೊಳ್ಳಬೇಕು. ನೀವು ತೆಗೆದುಕೊಳ್ಳುವ ತೀರ್ಮಾನದಿಂದ ನಾಳೆ ಇತರ ಜಾತಿಗಳವರು, ಎಸ್‌ಸಿ ಸಮುದಾಯದವರು ಬೀದಿಗಿಳಿದು ಹೋರಾಟ ಮಾಡದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಎಲ್ಲ ವಿಷಯಗಳನ್ನೂ ವಿಮರ್ಶಿಸಿ, ಸಮರ್ಪಕ ತೀರ್ಮಾನವನ್ನು ರಾಜ್ಯದ ಮುಖ್ಯಮಂತ್ರಿಗಳು ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಗೊಂದಲಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣಕರ್ತರು. ಗೊಂದಲಗಳು, ಸಮಸ್ಯೆಗೆ ಇತಿಶ್ರೀ ಹಾಡುವ ಕರ್ತವ್ಯ ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಇದೆ. ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಾರೆ ಎಂಬ ಅಪೇಕ್ಷೆಯಲ್ಲಿ ನಮ್ಮ ಎಸ್‌ಸಿ ಸಮುದಾಯ ಇದೆ ಎಂದು ತಿಳಿಸಿದರು.  ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಒಳ ಮೀಸಲಾತಿ ವಿಷಯದಲ್ಲಿ ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ. ಸರ್ಕಾರವು ಗೊಂದಲದಲ್ಲಿ ಇರುವುದನ್ನು ನಾವು ನೋಡಿದ್ದೇವೆ ಎಂದು ಟೀಕಿಸಿದರು. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ ಪರಿಶಿಷ್ಟ ಜಾತಿಗೆ 15% ಇದ್ದುದನ್ನು 17%ಗೆ ಏರಿಸಿದ್ದರು. ಪರಿಶಿಷ್ಟ ಪಂಗಡಕ್ಕೆ 3% ಇದ್ದುದನ್ನು ಏರಿಸಿ 7% ಮಾಡಿದ್ದರು. ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು, ಅವರ ಜೊತೆಗಾರರು ಅದು ಅನುಷ್ಠಾನ ಆಗಿಲ್ಲ, ಬಿಜೆಪಿಯವರು ಕೇವಲ ಭಾಷಣ ಮಾಡುತ್ತಾರೆ ಎಂದು ಅಪಪ್ರಚಾರ ಮಾಡಿದ್ದರು ಎಂದು ಆಕ್ಷೇಪಿಸಿದರು.

Leave a Reply

Your email address will not be published. Required fields are marked *

error: Content is protected !!