
ಉದಯವಾಹಿನಿ, ಮಂಗಳೂರು: ಧರ್ಮಸ್ಥಳದಲ್ಲಿ ಪುತ್ರಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಸುಜಾತ ಭಟ್ ಸಾಕ್ಷ್ಯಕ್ಕಾಗಿ ಸುಳ್ಳು ಫೋಟೋ ಬಿಡುಗಡೆ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ.
ಹೌದು, ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿಂತೆ ಯಾವುದೇ ದಾಖಲೆಯನ್ನು ಸುಜಾತ ಭಟ್ ಬಿಡುಗಡೆ ಮಾಡಿರಲಿಲ್ಲ. ಕೊನೆಗೆ ಯಾವುದಾದರೂ ಫೋಟೋ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸುಜಾತ ಭಟ್ ಫೋಟೋ ಬಿಡುಗಡೆ ಮಾಡಿದ್ದರು. ಆದರೆ ಈಗ ಬಿಡುಗಡೆಯಾದ ಫೋಟೋ ಮೃತಪಟ್ಟ ವ್ಯಕ್ತಿಯ ಫೋಟೋ ಎನ್ನವ ವಿಚಾರ ಬೆಳಕಿಗೆ ಬಂದಿದೆ. ಪ್ರಭಾಕರ್ ಬಾಳಿಗ ಅನ್ನುವವರ ಜತೆ ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿದ್ದ ಸುಜಾತ ನಂತರ ಬೆಂಗಳೂರಿಗೆ ಬಂದ ಬಳಿಕ ರಂಗಪ್ರಸಾದ್ ಎಂಬುವವರ ಜತೆ ಲಿವಿಂಗ್ ಇನ್ ರಿಲೇಶನ್‌ಷಿಪ್‌ನಲ್ಲಿ ಇದ್ದರು.ರಂಗಪ್ರಸಾದ್ ಬಿಇಎಲ್‌ನ ನಿವೃತ್ತ ಸಿಬ್ಬಂದಿಯಾಗಿದ್ದು ಪತ್ನಿ ಮೃತಪಟ್ಟ ಬಳಿಕ ರಂಗಪ್ರಸಾದ್ ಒಬ್ಬಂಟಿಯಾಗಿ ಇದ್ದರು. ಇಬ್ಬರು ಮಕ್ಕಳಿಗೆ ಮದುವೆ ಮಾಡಿಸಿದ್ದ ರಂಗಪ್ರಸಾದ್ ಅವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು.
ಅನಾರೋಗ್ಯ ಕಾರಣಕ್ಕೆ ಆಸ್ಪತ್ರೆಗೆ ಹೋಗುತ್ತಿದ್ದಾಗ ಕೇರ್ ಟೇಕರ್ ಆಗಿದ್ದ ಸುಜತಾ ಅವರ ಪರಿಚಯ ರಂಗಪ್ರಸಾದ್ ಅವರಿಗೆ ಆಗಿದೆ. ಇಬ್ಬರು ಒಂಟಿಯಾಗಿದ್ದ ಕಾರಣ ಸುಜತಾ ಅವರನ್ನು ತಮ್ಮ ಮನೆಗೆ ರಂಗಪ್ರಸಾದ್ ಕರೆದುಕೊಂಡು ಬಂದಿದ್ದರು. ರಂಗ ಪ್ರಸಾದ್ ಅವರ ಪುತ್ರ ಶ್ರೀವತ್ಸ ವಾಸಂತಿ ಅವರನ್ನು ಮದುವೆಯಾಗಿದ್ದರು. ವಾಸಂತಿ 2007ರಲ್ಲಿಯೇ ಮೃತಪಟ್ಟಿದ್ದರೆ ಶ್ರೀವತ್ಸ 2015ರಲ್ಲಿ ಮೃತಪಟ್ಟಿದ್ದರು. ರಂಗಪ್ರಸಾದ್ ಈ ವರ್ಷದ ಜನವರಿಯಲ್ಲಿ ಮೃತಪಟ್ಟಿದ್ದರು. ರಂಗಪ್ರಸಾದ್ ಮನೆಯಲ್ಲಿದ್ದಾಗ ಹೇಗೋ ವಾಸಂತಿ ಫೋಟೋವನ್ನು ಸಂಗ್ರಹಿಸಿದ್ದ ಸುಜತಾ ಭಟ್ ಈಗ ಅದೇ ಫೋಟೋವನ್ನು ತೋರಿಸಿ ಈಕೆಯ ಅನನ್ಯಾ ಭಟ್ ಎಂದಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
