ಉದಯವಾಹಿನಿ, ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿ ಮರಳಿದ್ದ ಭಾರತೀಯ ವಾಯುಪಡೆಯ ಪೈಲಟ್, ಗಗನಯಾತ್ರಿ ಶುಭಾಂಶು ಶುಕ್ಲಾ ಇವತ್ತು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ.ಪ್ರಧಾನಿ ನಿವಾಸದಲ್ಲಿ ಮೋದಿಯವರು ಶುಭಾಂಶು ಶುಕ್ಲಾರನ್ನು ಆಲಿಂಗಿಸಿ ಬರಮಾಡಿಕೊಂಡರು. ಈ ವೇಳೆ ಶುಕ್ಲಾ ಮೋದಿಯವರಿಗೆ ತಾವು ಬಾಹ್ಯಾಕಾಶಕ್ಕೆ ಕೊಂಡೊಯ್ದಿದ್ದ ತ್ರಿವರ್ಣ ಧ್ವಜವನ್ನು ಉಡುಗೊರೆಯಾಗಿ ನೀಡಿದರು. ಜೊತೆಗೆ ತಮ್ಮ ಬಾಹ್ಯಾಕಾಶ ಯಾನದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಮೋದಿ, ಶುಕ್ಲಾ ಅವರ ಸಾಧನೆಗಳನ್ನು ಮಾತ್ರವಲ್ಲದೇ, ಭೂಮಿಯಾಚೆಗೆ ಕನಸು ಕಾಣಲು ಯುವಪೀಳಿಗೆಯನ್ನು ಪ್ರೇರೇಪಿಸಿದ್ದಕ್ಕಾಗಿ ಶ್ಲಾಘಿಸಿದರು.
ಇನ್ನೂ ಸೋಮವಾರ ಸಂಸತ್ತಿನಲ್ಲಿ ಶುಭಾಂಶು ಶುಕ್ಲಾ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಲೋಕಸಭೆಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಶುಕ್ಲಾ ಸಾಧನೆಯನ್ನು ಬಣ್ಣಿಸಿ, 2040ರಲ್ಲಿ ಭಾರತದ ಗಗನಯಾನಿ ಚಂದ್ರನ ಮೇಲೆ ಇಳಿಯಲಿದ್ದಾರೆ ಎಂದು ಹೇಳಿದರು. ಇತ್ತ ಎಕ್ಸ್ನಲ್ಲಿ ಶಶಿ ತರೂರ್ ಅವರು ಶುಕ್ಲಾ ಸಾಧನೆಯನ್ನು ಕೊಂಡಾಡಿದ್ದಾರೆ.
