ಉದಯವಾಹಿನಿ, ವಾಷಿಂಗ್ಟನ್: ಉಕ್ರೇನ್- ರಷ್ಯಾ ಯುದ್ಧ ಕೊನೆಗೊಳಿಸಲು ಪ್ರಯತ್ನ ನಡೆಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ವ್ಲಾದಿಮಿರ್ ಪುಟಿನ್ ಮತ್ತು ಝೆಲೆನ್‌ಸ್ಕಿ ಮಾತುಕತೆಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ.ಅಲಾಸ್ಕಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮತ್ತು ಯೋಪಿಯನ್ ನಾಯಕರ ಜೊತೆ ಸಭೆ ನಡೆಸಿದರು.
ಝೆಲೆನ್‌ಸ್ಕಿ ಭೇಟಿ ವೇಳೆ ಮಾತನಾಡಿದ ಟ್ರಂಪ್, ಯುದ್ಧ ಕೊನೆಗೊಳ್ಳಲಿದೆ. ಅದು ಯಾವಾಗ ಕೊನೆಗೊಳ್ಳುತ್ತದೆ ಎಂದು ನಾನು ನಿಮಗೆ ಹೇಳಲಾರೆ. ಆದರೆ ಈ ಯುದ್ಧ ನಿಲ್ಲಲಿದೆ. ಪುಟಿನ್ ಯುದ್ಧ ನಿಲ್ಲಿಸಲು ಬಯಸುತ್ತಿದ್ದು ಝೆಲೆನ್ಸ್ಕಿ ಕೂಡ ಒಪ್ಪಿಕೊಂಡರೆ ಶೀಘ್ರದಲ್ಲೇ ಯುದ್ಧ ನಿಲ್ಲುತ್ತದೆ ಅಂತ ಹೇಳಿದ್ದಾರೆ. ಇಡೀ ಜಗತ್ತು ಈ ಯುದ್ಧದಿಂದ ಬೇಸತ್ತಿದೆ. ನಾವು ಅದನ್ನು ಕೊನೆಗೊಳಿಸುತ್ತೇವೆ. ನಾನು 6 ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಅದರಲ್ಲಿ ಭಾರತ -ಪಾಕ್ ಯುದ್ಧವೂ ಒಂದು ಎಂದು ಟ್ರಂಪ್ ಹೇಳಿದರು.ಟ್ರಂಪ್ ಮತ್ತು ಝೆಲೆನ್ಸ್ಕಿ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಉಪಸ್ಥಿತರಿದ್ದರು.
