ಉದಯವಾಹಿನಿ, ಬೆಂಗಳೂರು: ಅನಾಮಿಕ ವ್ಯಕ್ತಿ ಹಣಕ್ಕೆ ಧರ್ಮಸ್ಥಳ ದೇವಸ್ಥಾನದ ಮೇಲೆ ಆರೋಪ ಮಾಡಿರುವ ಸಾಧ್ಯತೆಯಿದೆ ಎಂದು ಈ ಹಿಂದೆ ದೇವಸ್ಥಾನದಲ್ಲಿ ಕಸ ಗುಡಿಸುತ್ತಿದ್ದ ಮಂಡ್ಯ ಮೂಲದ ರಾಜು ಹೇಳಿದ್ದಾರೆ. ಮಾತನಾಡಿದ ಅವರು, ನಾನು ನಾಲ್ಕು ವರ್ಷಗಳ ಕಾಲ ಧರ್ಮಸ್ಥಳದಲ್ಲಿ 10 ವರ್ಷಗಳ ಹಿಂದೆ ಕೆಲಸ ಮಾಡಿದ್ದೇನೆ. ನಮಗೆ ಮಾಹಿತಿ ಕಚೇರಿಯಿಂದ ವಿಷಯ ತಿಳಿಸಲಾಗಿತ್ತು. ಆಗ ನಾವು ಹೆಣಗಳನ್ನು ಎತ್ತಿ ದಡಕ್ಕೆ ತರುತ್ತಿದ್ದೆವು. ನಂತರ ಅದನ್ನು ಅಂಬುಲೆನ್ಸ್ ಮೂಲಕ ಬೆಳ್ತಂಗಡಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿಸಿದರು. ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು. ಶವ ಹೂತಿದ್ದರೆ ಮೂಳೆಗಳು ಸಿಗಬೇಕಿತ್ತು. ಜೆಸಿಬಿ ತಂದರೂ ಮೂಳೆ ಸಿಕ್ಕಿಲ್ಲ. ಕೆಲಸ ಕೊಟ್ಟ ಧಣಿಗಳ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಇದು ಬಹಳ ತಪ್ಪು ಎಂದು ಹೇಳಿದರು.
ಮೊದಲು ಇಲ್ಲಿ ನನ್ನ ಅತ್ತೆ, ಮಾವ ಇಲ್ಲಿ ಸಚ್ಛತಾ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ಹುಷಾರಿಲ್ಲದ ಕಾರಣ ನಾನು ಹೋಗಿದ್ದೆ. ಈ ಸಂದರ್ಭದಲ್ಲಿ ನಮ್ಮ ಕುಟುಂಬ ಮತ್ತು ಮಾಸ್ಕ್ ಮ್ಯಾನ್ ಕುಟುಂಬ ಹತ್ತಿರ ಹತ್ತಿರ ನೆಲೆಸಿದ್ದೆವು.
ನಾನು ದೇವಸ್ಥಾನ, ನೇತ್ರಾವತಿ ಸ್ನಾನಘಟ್ಟ, ಬಾಹುಬಲಿ ಬೆಟ್ಟದಲ್ಲಿ ಕೆಲಸ ಮಾಡಿದ್ದೇನೆ. ಮೂರು ತಿಂಗಳಿಗೊಮ್ಮೆ ಕೆಲಸದ ಜಾಗ ಬದಲಾವಣೆ ಆಗುತ್ತಿತ್ತು. ಧಣಿಗಳು ಯಾವತ್ತೂ ಆ ಕೆಲಸ ಮಾಡು ಈ ಕೆಲಸ ಮಾಡು ಎಂದು ಹೇಳುತ್ತಿರಲಿಲ್ಲ. ಎದುರು ಸಿಕ್ಕಿದಾಗ ನಾವು ನಮಸ್ಕಾರ ಮಾಡುತ್ತಿದ್ದೆವು.
