ಉದಯವಾಹಿನಿ, ಬೆಂಗಳೂರು: ಎಸ್‌ಇ ಒಳ ಮೀಸಲಾತಿಯ ಕುರಿತಂತೆ ಆದೇಶ ಹೊರಡಿಸಿದ ಕೂಡಲೇ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಹಾಗೂ ಒಂದು ಬಾರಿಗೆ ವಯೋಮಿತಿ ಸಡಿಲಿಸಲು ತೀರ್ಮಾನಿಸಿದ್ದೇವೆ. ಇದೇ ಸಂದರ್ಭದಲ್ಲಿ ಒಳ ಮೀಸಲಾತಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ತೀರ್ಮಾನಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಪರಿಶಿಷ್ಟ ಜಾತಿಗಳ ಒಳಮೀಸಲಾತಿ- ಸರ್ಕಾರದ ತೀರ್ಮಾನ ಕುರಿತಂತೆ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದರು. ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆಯನ್ನು ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿಕೊಂಡು, ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚಿಸಲು ತೀರ್ಮಾನಿಸಿದ್ದೇವೆ.
ಜಸ್ಟೀಸ್ ಎಚ್.ಎನ್. ನಾಗಮೋಹನ್‌ದಾಸ್ ಅವರ ಆಯೋಗವು ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ದಿನಾಂಕ: 01.08.2025 ರಂದು ವರದಿಯನ್ನು ಸಲ್ಲಿಸಿತು. ಆಯೋಗವು ಪರಿಶಿಷ್ಟ ಜಾತಿಗಳಿಗೆ ಸೇರಿದ 1,05,09,871 ಜನರ ದತ್ತಾಂಶಗಳನ್ನು ಸಂಗ್ರಹಿಸಿದೆ. ಶೇ.93 ರಷ್ಟು ಪರಿಶಿಷ್ಟ ಜಾತಿಗಳ ಜನಸಂಖ್ಯೆಯು ಈ ಸಮೀಕ್ಷೆಗೆ ಲಭ್ಯವಾಗಿದೆ. ಸಚಿವ ಸಂಪುಟವು ಈ ವರದಿಯನ್ನು ಕೂಲಂಕಶವಾಗಿ ಪರಿಶೀಲಿಸಿದೆ.
ದಿನಾಂಕ 19-8-2025 ರಂದು ನಡೆದ ಸಚಿವ ಸಂಪುಟದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಅವರ ಶಿಫಾರಸುಗಳನ್ನು ಕೆಲವು ಮಾರ್ಪಾಟುಗಳೊಂದಿಗೆ ಅಂಗೀಕರಿಸಿದ್ದೇವೆ. ​ಎಡಗೈ ಸಂಬಂಧಿತ ಜಾತಿಗಳೆಂದು ಆಯೋಗವು ಗುರ್ತಿಸಿರುವ ಸಮುದಾಯಗಳಿಗೆ ಶೇ.6 ರಷ್ಟು ಒಳಮೀಸಲಾತಿ ಕಲ್ಪಿಸಲು ತೀರ್ಮಾನಿಸಿದ್ದೇವೆ.
ಆಯೋಗವು ಪರಯ, ಮೊಗೇರ ಮುಂತಾದ ಬಲಗೈ ಸಂಬಂಧಿತ ಜಾತಿಗಳನ್ನು ಎಡಗೈ ಸಂಬಂಧಿತ ಜಾತಿಗಳ ಜೊತೆ ಸೇರಿಸಲಾಗಿದೆ ಎಂಬುದನ್ನು ಗಮನಿಸಿದ ಸಚಿವ ಸಂಪುಟವು ಈ ಜಾತಿಗಳನ್ನು ಬಲಗೈ ಸಂಬಂಧಿತ ಜಾತಿಗಳ ಜತೆ ಸೇರಿಸಿ ಬಲಗೈ ಸಂಬಂಧಿತ ಜಾತಿಗಳ ಸಮೂಹಕ್ಕೆ ಶೇ.6 ರಷ್ಟು ಮೀಸಲಾತಿ ಕಲ್ಪಿಸಲು ತೀರ್ಮಾನಿಸಿದ್ದೇವೆ. ಇದರ ಜೊತೆಯಲ್ಲಿ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಗುಂಪುಗಳಲ್ಲಿನ 4,74,954 ಜನಸಂಖ್ಯೆಯನ್ನು ಎಡಗೈ ಸಂಬಂಧಿತ ಮತ್ತು ಬಲಗೈ ಸಂಬಂಧಿತ ಜಾತಿಗಳ ಜೊತೆ ಸಮಾನವಾಗಿ ಹಂಚಿಕೆ ಮಾಡಲು ತೀರ್ಮಾನಿಸಿದ್ದೇವೆ.

Leave a Reply

Your email address will not be published. Required fields are marked *

error: Content is protected !!