ಉದಯವಾಹಿನಿ, ಬೆಂಗಳೂರು: ಜನಸಂದಣಿ ವಿಪತ್ತಿಗೆ ಕಾರಣರಾಗುವ, ಆ ಸಂದರ್ಭದಲ್ಲಿ ದೈಹಿಕ ಗಾಯಗಳಿಗಾಗಿ ಕಾರಣವಾಗುವವರ ವಿರುದ್ಧ ಕನಿಷ್ಠ ಮೂರು ವರ್ಷಗಳು ಮತ್ತು ಏಳು ವರ್ಷಗಳವರೆಗಿನ ಕಾರಾವಾಸ ಹಾಗೂ ಪ್ರಾಣಹಾನಿ ಪ್ರಕರಣಗಳಿಗೆ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಶಿಕ್ಷೆಯವರೆಗೆ ಗುರಿಪಡಿಸಲು ಅವಕಾಶ ನೀಡುವ 2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ(ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ನಿರ್ವಹಣೆ) ವಿಧೇಯಕವನ್ನು ವಿಧಾನಸಭೆಯಲ್ಲಿಂದು ಸದನ ಸಮಿತಿಗೆ ವಹಿಸಲಾಯಿತು.
ಶಾಸನರಚನಾ ಕಲಾಪದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಡಿಸಿ, ಸುದೀರ್ಘ ವಿವರಣೆ ನೀಡಿದ ನಂತರ ಶಾಸಕರು ಪಕ್ಷಬೇಧ ಮರೆತು ಹಲವು ಸೂಚನೆಗಳನ್ನು ನೀಡಿದರು.ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳ ಶಾಸಕರು, ಇದೊಂದು ಗಂಭೀರವಾದ ವಿಧೇಯಕವಾಗಿದ್ದು, ಸುದೀರ್ಘ ಚರ್ಚೆ ಅಗತ್ಯವಿದೆ. ಇದನ್ನು ಸದನ ಸಮಿತಿಗೆ ವಹಿಸುವಂತೆ ಆಗ್ರಹಿಸಿದರು. ಇದಕ್ಕೆ ಗೃಹಸಚಿವ ಪರಮೇಶ್ವರ್ ಅವರು ಸದನಸಮಿತಿ ರಚನೆಗೆ ಒಪ್ಪಿಗೆ ಸೂಚಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಘಟನೆ, ದೇಶದ ಹಲವೆಡೆ ಸಂಭವಿಸಿರುವ ಕಾಲ್ತುಳಿತದ ದುರ್ಘಟನೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಹಾಗೂ ಆಯೋಜಕರನ್ನು ಜವಾಬ್ದಾರರನ್ನಾಗಿ ಮಾಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ.ಕಾನೂನುಬಾಹಿರವಾಗಿ ಗುಂಪುಗೂಡುವುದನ್ನು ಪ್ರತಿಬಂಧಿಸಲು ಮತ್ತು ಅಪರಾಧಗಳ ದಂಡನೆಗಾಗಿ ಉಪಬಂಧಗಳನ್ನು ಕಲ್ಪಿಸಲು ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಗುಂಪುಗೂಡಿಕೆಯನ್ನು ನಿರ್ವಹಿಸಲು ಈ ವಿಧೇಯಕ ಅವಕಾಶ ಮಾಡಿಕೊಡಲಿದೆ ಎಂದರು.
