ಉದಯವಾಹಿನಿ, ಮುಂಬೈ: ಮುಂಜಾನೆ ವೇಳೆ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಳು ಬೀದಿನಾಯಿಗಳ ಗುಂಪು ಏಕಾಏಕಿ ದಾಳಿ ಮಾಡಿದ ಘಟನೆ ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನಡೆದಿದೆ. ಅದೃಷ್ಟವಶಾತ್ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಬೆಳಗ್ಗೆ 5 ಗಂಟೆ ಸುಮಾರಿಗೆ ಆ ವ್ಯಕ್ತಿ ಕೆಲಸಕ್ಕೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಸುಮಾರು ಮೂರು ನಿಮಿಷಗಳ ಈ ವಿಡಿಯೊದಲ್ಲಿ, ಆ ವ್ಯಕ್ತಿ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಬಂದಿದೆ. ಆಗ ಏಳು ಬೀದಿ ನಾಯಿಗಳು ಅವನ ಕಡೆಗೆ ಓಡಿ ಬಂದು ಏಕಾಏಕಿ ದಾಳಿ ಮಾಡಿವೆ. ಶ್ವಾನಗಳು ಅವನನ್ನು ಕಚ್ಚಲು ಪ್ರಯತ್ನಿಸುತ್ತಿರುವುದು ಕೂಡ ಸೆರೆಯಾಗಿದೆ. ನಂತರ ಆ ವ್ಯಕ್ತಿ ಹಾರಿ ಒಂದು ಬೈಕಿನ ಹಿಂದೆ ನಿಂತಿದ್ದಾನೆ. ನಾಯಿಗಳು ಅವನ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದಾಗ, ಬೈಕ್ ಅನ್ನು ಅವುಗಳ ಕಡೆಗೆ ತಳ್ಳಿದ್ದಾನೆ.
ಆದರೂ ಆತನ ಮೇಲೆ ದಾಳಿ ಮಾಡಲು ಬೀದಿನಾಯಿಗಳು ಪ್ರಯತ್ನಿಸಿವೆ. ರಸ್ತೆಯ ಬದಿಯಲ್ಲಿ ನಿಂತಿದ್ದ ವ್ಯಕ್ತಿ ಮರದ ಹಲಗೆಯಿಂದ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಹತ್ತಿರದಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಮನೆಗಳಿಂದ ಹೊರಬಂದು ನಾಯಿಗಳನ್ನು ಓಡಿಸುವಲ್ಲಿ ಯಶಸ್ವಿಯಾದರು. ಆಗ ನಾಯಿಗಳು ಓಡಿಹೋದವು. ಶ್ವಾನಗಳ ದಾಳಿಯಲ್ಲಿ ಆ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
