ಉದಯವಾಹಿನಿ, ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ನಿಮಿತ್ತ ಭಾರತ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli) ಲಂಡನ್‌ನ ಲಾರ್ಡ್ಸ್‌ ಅಂಗಣದಲ್ಲಿ ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದಾರೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಬಳಿಕ ವಿರಾಟ್‌ ಕೊಹ್ಲಿ ವಿರಾಮ ಪಡೆಯುತ್ತಿದ್ದಾರೆ. ಅವರು ತಮ್ಮ ಕುಟುಂಬದ ಜೊತೆಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರು ಈಗಾಗಲೇ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಅವರು ಕೇವಲ 50 ಓವರ್‌ಗಳ ಸ್ವರೂಪದಲ್ಲಿ ಸಕ್ರಿಯರಾಗಿದ್ದಾರೆ. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಅವರು ಎದುರು ನೋಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರೂ ವಿರಾಟ್‌ ಕೊಹ್ಲಿ ನಿಯಮಿತವಾಗಿ ಫಿಟ್‌ನೆಸ್‌ ಹಾಗೂ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಆ ಮೂಲಕ ಅವರು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಉದ್ದೇಶವನ್ನು ಹೊಂದಿದ್ದಾರೆ. ಅಂದ ಹಾಗೆ ಅವರು ಶನಿವಾರ ಲಾರ್ಡ್ಸ್‌ ಅಂಗಣದಲ್ಲಿಅಭ್ಯಾಸವನ್ನು ಮುಗಿಸಿಕೊಂಡು ಬರುವ ವೇಳೆ ಅಭಿಮಾನಿಗಳ ಫೋಟೋಗೆ ಪೋಸ್‌ ನೀಡಿದ್ದಾರೆ. ಪರ್ತ್‌ನಲ್ಲಿ ಅಕ್ಟೋಬರ್‌ 19 ರಂದು ಮೊದಲನೇ ಪಂದ್ಯದ ಮೂಲಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಇದರ ಹೊರತಾಗಿಯೂ ಈ ಸರಣಿಯಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಇಬ್ಬರೂ ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳಬಹುದೆಂಬ ಸುದ್ದಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ, ಬಿಸಿಸಿಐ ಮೂಲಗಳು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಈ ಇಬ್ಬರೂ ಆತುರದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಹಾಗೂ ಅವರು ಭಾರತ ತಂಡಕ್ಕೆ ಪ್ರಮುಖ ಆಧಾರ ಸ್ಥಂಭಗಳು ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!