ಉದಯವಾಹಿನಿ, ಮುಂಬೈ: ಟೆಸ್ಟ್‌ ಪರಿಣತ ಬ್ಯಾಟರ್‌ ಚೇತೇಶ್ವರ ಪೂಜಾರ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಇಂದು ನಿವೃತ್ತಿ ಘೋಷಿಸಿದ್ದಾರೆ. ಈ ವರ್ಷ ರೋಹಿತ್‌ ಶರ್ಮಾ (ಟೆಸ್ಟ್‌), ವಿರಾಟ್‌ ಕೊಹ್ಲಿ (ಟೆಸ್ಟ್‌), ರವಿಚಂದ್ರನ್‌ ಅಶ್ವಿನ್‌ (ಎಲ್ಲಾ ಮಾದರಿ) ಬಳಿಕ ಈಗ ಪೂಜಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಭಾವುಕ ಸಂದೇಶವೊಂದನ್ನೂ ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾ ಜೆರ್ಸಿಯನ್ನ ಧರಿಸಿ ರಾಷ್ಟ್ರಗೀತೆ ಹಾಡುವುದು, ಪ್ರತಿ ಬಾರಿ ಮೈದಾನಕ್ಕಿಳಿದಾಗ ನನ್ನ ಅತ್ಯುತ್ತಮ ಪ್ರಯತ್ನ ಮಾಡುವುದು ಇದೆಲ್ಲವೂ ಪದಗಳಲ್ಲಿ ವರ್ಣಿಸಲು ಅಸಾಧ್ಯ. ಆದ್ರೆ ಎಲ್ಲ ಒಳ್ಳೇ ವಿಷಯಗಳೂ ಎಂದಾದರೂ ಕೊನೆಗೊಳ್ಳಬೇಕಲ್ಲವೇ? ಅದೇ ರೀತಿ ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ, ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಅಂತ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.
ರಾಜ್‌ಕೋಟ್‌ನಲ್ಲಿ ಜನಿಸಿದ 37 ವರ್ಷದ ಪೂಜಾರ 2010ರಲ್ಲಿ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದರು. ಟೀಂ ಇಂಡಿಯಾದಲ್ಲಿ ಅತಿಹೆಚ್ಚು ರನ್‌ ಗಳಿಸಿದ 8ನೇ ಟೆಸ್ಟ್‌ ಬ್ಯಾಟರ್‌ ಎನಿಸಿಕೊಂಡಿದ್ದರು. ಇದುವರೆಗೆ 103 ಟೆಸ್ಟ್‌, 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೀಂ ಇಂಡಿಯಾ ಪರ 103 ಟೆಸ್ಟ್‌ ಪಂದ್ಯಗಳಲ್ಲಿ 43.60 ಸರಾಸರಿಯಲ್ಲಿ 7,195 ರನ್‌ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 35 ಅರ್ಧಶತಕಗಳು ಸೇರಿವೆ. ತವರಿನಲ್ಲಿ ನಡೆದ ಒಟ್ಟು ಟೆಸ್ಟ್‌ನಲ್ಲಿ 3,839 ರನ್ ಗಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್‌ ಆಗಿದ್ದ ಪೂಜಾರ, ಸ್ವದೇಶಿ ಮತ್ತು ವಿದೇಶಗಳಲ್ಲಿ ನಡೆದ ಟೆಸ್ಟ್‌ ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಕಳೆದ ವರ್ಷಗಳಲ್ಲಿ ಸಂಪೂರ್ಣವಾಗಿ ಫಾರ್ಮ್‌ ಕಳೆದುಕೊಂಡಿದ್ದರು. ಇದು ಅವರನ್ನು ನಿವೃತ್ತಿಯ ಕಡೆಗೆ ಸೆಳೆದಿರಬಹುದು ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!