ಉದಯವಾಹಿನಿ, ರಾಯಚೂರು: ರಾಹುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆ ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಗ್ರಹಣ ಮುಕ್ತಾಯ ಬಳಿಕ ತುಂಗಭದ್ರಾ ನದಿಯಲ್ಲಿ ಧಂಡೋದಕ ಸ್ನಾನ ನೆರವೇರಿಸಿದರು. ಧಂಡೋದಕ ಸ್ನಾನದ ವೇಳೆ ಮಠದ ಅರ್ಚಕರು, ನೂರಾರು ಭಕ್ತರು ಭಾಗವಹಿಸಿದ್ದರು. ಚಂದ್ರಗ್ರಹಣದ ಹಿನ್ನೆಲೆ ತುಂಗಾ ಸ್ನಾನ ಮಾಡಿದ ಶ್ರೀಗಳು ಪುಣ್ಯ ಸ್ನಾನದ ಬಳಿಕ ರಾಯರ ಮೂಲ ವೃಂದಾವನಕ್ಕೆ ಜಲಾಭಿಷೇಕ ಮಾಡಿದರು. ನಂತರ ಲೋಕ ಕಲ್ಯಾಣಕ್ಕಾಗಿ ನವಗ್ರಹ ಶಾಂತಿ ಹೋಮವನ್ನು ಮಾಡಿದರು.
ಗ್ರಹಣದ ಸಮಯದಲ್ಲಿಯೂ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಗ್ರಹಣ ವೇಳೆ ಮಠದ ಪ್ರಾಂಗಣದಲ್ಲಿ ಶ್ಲೋಕ ಪಠಿಸಿ, ಭಜನೆ ಮಾಡಿದರು. ಇನ್ನೂ ಇಂದು ಬೆಳಗ್ಗೆಯಿಂದ ಎಂದಿನಂತೆ ನಿತ್ಯ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ಭಕ್ತರು ರಾಯರ ವೃಂದಾವನದ ದರ್ಶನ ಪಡೆಯುತ್ತಿದ್ದಾರೆ.
