ಉದಯವಾಹಿನಿ, ಕಠ್ಮಂಡು: ನೆರೆಯ ದೇಶ ನೇಪಾಳ ಕಠ್ಮಂಡುವಿನ ಹೃದಯಭಾಗದಲ್ಲಿರುವ ಹಳೆಯ ಅರಮನೆಯಲ್ಲಿ ತಿಂಗಳುಗಳ ಕಾಲ ನಡೆಯುವ ಹಬ್ಬದ ಋತುವಿಗೆ ಚಾಲನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಸಾವಿರಾರು ಭಕ್ತರು ಅರಮನೆಗೆ ಆಗಮಿಸಿದರು. ನೇಪಾಳದ ಹಬ್ಬದ ಋತುವು ದೇವತೆಯ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ಅತಿ ದೊಡ್ಡ ಧಾರ್ಮಿಕ ಹಬ್ಬವಾದ ಈ ಇಂದ್ರ ಜಾತ್ರೆಯ ಭಾಗವಾಗಿ ಕುಮಾರಿ (Kumari) ದೇವತೆಯನ್ನು ಆಯ್ಕೆ ಮಾಡುವುದು ಇಲ್ಲಿನ ವಿಶೇಷ. ಮಾನವ ರೂಪದಲ್ಲಿರುವ ದೇವತೆಗಳಾದ ಕುಮಾರಿ, ಗಣೇಶ, ಮತ್ತು ಭೈರಬ್ ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಇದನ್ನು ವೀಕ್ಷಿಸಲು ಭಕ್ತರು ಕಠ್ಮಂಡುವಿನ ಬಸಂತಪುರ ದರ್ಬಾರ್ ಚೌಕದಲ್ಲಿ ಜಮಾಯಿಸಿದ್ದರು.
ಈ ಹಬ್ಬವು ನೇಪಾಳದ ಹಬ್ಬದ ಋತುವಿಗೆ ಅಧಿಕೃತವಾಗಿ ಚಾಲನೆ ನೀಡುತ್ತದೆ. ಬಸಂತಪುರ ದರ್ಬಾರ್ ಚೌಕ, ಕಠ್ಮಂಡುವಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ಸ್ಥಳದಲ್ಲಿ ಭಕ್ತರ ಮಹಾಸಾಗರ ಕಂಡುಬಂತು. ಈ ಸಂದರ್ಭ ದೇವತೆಗಳ ರಥೋತ್ಸವ, ಸಾಂಪ್ರದಾಯಿಕ ನೃತ್ಯಗಳು, ವಾದ್ಯಮೇಳಗಳು, ಧಾರ್ಮಿಕ ಆಚರಣೆಗಳು ನಡೆದವು. ಇಂದ್ರ ಜಾತ್ರೆ ಹಬ್ಬವು ದೇವೇಂದ್ರನಿಗೆ ಸಮರ್ಪಿತವಾಗಿದ್ದು, ಉತ್ತಮ ಬೆಳೆಗಾಗಿ ಹಾಗೂ ಜನತೆಗೆ ಸುಖ-ಶಾಂತಿ ನೆಮ್ಮದಿ ನೀಡುವಂತೆ ಪ್ರಾರ್ಥಿಸಲಾಗುತ್ತದೆ.
ಕುಮಾರಿ ದೇವತೆ ಅಂದರೆ ಏನು?
ಕುಮಾರಿ ದೇವಿಯ ಆಯ್ಕೆ ಇದು ಒಂದು ವಿಶಿಷ್ಟ ಆಚರಣೆ. ಉತ್ಸವದ ಸಮಯದಲ್ಲಿ ಅನೇಕ ಪುಟ್ಟ ಹುಡುಗಿಯರು ಜೀವಂತ ದೇವತೆ ಕುಮಾರಿ ಹಂಗ್ ಚುಂಗ್ ಚಿಹ್ ಆಗಿ ವೇಷ ಧರಿಸುತ್ತಾರೆ. ಕುಮಾರಿ ಎಂದು ಕರೆಯುವ ದೇವತೆಯನ್ನು ಇಲ್ಲಿನ ಹಿಂದೂಗಳು ಪೂಜಿಸುತ್ತಾರೆ. ಶಿವನ ಪತ್ನಿ ಪಾರ್ವತಿಯ ರೂಪ ಎಂದೇ ಆಕೆಯನ್ನು ಜನರು ನಂಬುತ್ತಾರೆ. ಆಕೆ ಚಿಕ್ಕ ಮಗುವಿನ ಅವತಾರವಾಗಿ ಜನಿಸಿದ್ದಾಳೆ ಎಂಬ ನಂಬಿಕೆ ಇದೆ. ಈ ಸಂಪ್ರದಾಯ ಎರಡು ಶತಮಾನಗಳಿಗೂ ಹೆಚ್ಚು ಕಾಲದಿಂದ ಮುಂದುವರಿದಿದೆ.
