ಉದಯವಾಹಿನಿ, ಜೆರುಸಲೆಮ್ (ಇಸ್ರೇಲ್): ʼʼಕೆಲವು ಮುಸ್ಲಿಂ ಮೂಲಭೂತವಾದಿ ದೇಶಗಳ ಕುಮ್ಮಕ್ಕಿನಿಂದ ಪ್ಯಾಲೆಸ್ಟಿನ್ ಮತ್ತು ಗಾಜಾ ಪಟ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವ ಹಮಾಸ್, ಹೆಜ್ಬುಲ್ಲಾದಂತಹ ಉಗ್ರರನ್ನು ಸಂಪೂರ್ಣ ನಾಶ ಮಾಡದೆ ವಿರಮಿಸುವುದಿಲ್ಲʼʼ ಎಂದು ಇಸ್ರೇಲ್ ವಿದೇಶಾಂಗ ಇಲಾಖೆಯ ಡೈರೆಕ್ಟರ್ ಜನರಲ್ ಈಡನ್ ಬಾರ್ ಟಾಲ್ ಸ್ಪಷ್ಟವಾಗಿ ಹೇಳಿದರು.ಭಾರತದಿಂದ ತೆರಳಿರುವ ಪತ್ರಕರ್ತರ ಜತೆ  ಜೆರುಸಲೆಂನಲ್ಲಿ ನಡೆಸಿದ ಸಂವಾದದಲ್ಲಿ ಅವರು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕ ನಡುವೆ ಅಧಿಕ ಸುಂಕದ ವಿಚಾರವಾಗಿ ಶೀತಲ ಸಮರ ನಡೆಯುತ್ತಿದೆ. ಇದು, ಇಸ್ರೇಲ್ ಮತ್ತು ಭಾರತದ ಬಾಂಧವ್ಯ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʼʼಭಾರತ ಹಾಗೂ ಇಸ್ರೇಲ್ ನಡುವೆ ಗಟ್ಟಿಯಾದ ಸ್ನೇಹವಿದೆ. ಯಾವ ಜಾಗತಿಕ ಬೆಳವಣಿಗೆಯೂ ಇಸ್ರೇಲ್ ಮತ್ತು ಭಾರತದ ಸ್ನೇಹದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಕೂಡ ಇಸ್ರೇಲ್‌‌ಗೆ ಭೇಟಿ ನೀಡಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು ಇಸ್ರೇಲ್ ಬೆಳವಣಿಗೆಗಳಿಗೆ ಸದಾ ಸ್ಪಂದಿಸುತ್ತಾರೆʼʼ ಎಂದು ಹೇಳಿದರು.ಉಗ್ರರ ನಿರ್ಮೂಲನೆಗೆ ರಾಜತಾಂತ್ರಿಕ ಪ್ರಯತ್ನ ಸೇರಿದಂತೆ ಎಲ್ಲ ಆಯ್ಕೆಗಳನ್ನು ಬಳಸಲಾಗುವುದು. ನಾವು ಗಾಜಾ ಮೇಲೆ ನಿಯಂತ್ರಣ ಸಾಧಿಸುತ್ತಿದ್ದೇವೆ. ಇಸ್ರೇಲ್ ವಿರುದ್ಧ ಹೆಜ್ಬುಲ್ಲಾ ಉಗ್ರರನ್ನು ಛೂಬಿಡುತ್ತಿರುವ ಇರಾನ್‌‌ಗೆ ತಕ್ಕ ಪಾಠ ಕಲಿಸುತ್ತೇವೆ. ಅಣ್ವಸ್ತ್ರಗಳ ಆಟ ಆಡಲು ನಾವು ಇರಾನ್‌‌ಗೆ ಬಿಡುವುದಿಲ್ಲʼʼ ಎಂದು ಎಚ್ಚರಿಕೆ ನೀಡಿದರು.ಗಾಜಾದಲ್ಲಿರುವ ಹಮಾಸ್ ಉಗ್ರರು ಸಂಪೂರ್ಣವಾಗಿ ಮಾರಕಾಸ್ತ್ರ ಒಪ್ಪಿಸಿ, ಶರಣಾಗುವವರೆಗೆ ನಾವು ಬಿಡುವುದಿಲ್ಲ. ಗಾಜಾದ ಬಹುತೇಕ ಪ್ರದೇಶಗಳು ಈಗ ನಮ್ಮ ವಶಕ್ಕೆ ಬಂದಿವೆʼʼ ಎಂದರು.ಭಾರತ ಸೂಪರ್ ಪವರ್ ದೇಶವಾಗಿ ಬೆಳೆಯುತ್ತಿದೆ. ಇಂಥ ಬಲಿಷ್ಠ ದೇಶಗಳ ಜತೆ ಇಸ್ರೇಲ್ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ. ಭಾರತದ ಜತೆ ಕೆಲವು ಪ್ರಗತಿಪರ ಮುಸ್ಲಿಂ ದೇಶಗಳ ಜತೆಗೆ ಮೈತ್ರಿ ಹೊಂದುವ ಮೂಲಕ, ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ದೇಶಗಳನ್ನು ಏಕಾಂಗಿಯಾಗಿಸಲಾಗುವುದುʼʼ ಎಂದವರು ವಿವರಿಸಿದರು.ಪ್ಯಾಲೆಸ್ಟಿನ್ ಮತ್ತು ಗಾಜಾದಲ್ಲಿ ಇಸ್ರೇಲ್ ದಾಳಿಯಿಂದಾಗಿ ಪತ್ರಕರ್ತರಿಗೆ ಉಗ್ರ ಸಂಘಟನೆಗಳ ನಂಟಿತ್ತು. ಅವರು ಪರ್ತಕರ್ತರ ಸೋಗಿನಲ್ಲಿದ್ದ ಉಗ್ರರು ಎಂದು ಮತ್ತೊಂದು ಪ್ರಶ್ನೆಗೆ ಅವರು ಉತ್ತರಿಸಿದರು. ಹಮಾಸ್ ಟಾಪ್ ಕಮಾಂಡರ್‌‌ಗಳನ್ನೆಲ್ಲ ನಾವು ಕೊಂದಿದ್ದೇವೆ. ಈ ಬೇಟೆ ಮುಂದುವರಿಯಲಿದೆʼʼ ಎಂದವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!