ಉದಯವಾಹಿನಿ, ನವದೆಹಲಿ: ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು (ಸೆ.9) ಚುನಾವಣೆ ನಡೆಯಲಿದೆ. ಆಡಳಿತ-ವಿರೋಧ ಪಕ್ಷದ ನಡುವೆ ಪ್ರತಿಷ್ಠೆಯ ಕಣವಾಗಿದ್ದು, ಎನ್‌ಡಿಎ ಅಭ್ಯರ್ಥಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲರಾಗಿರುವ ಸಿ.ಪಿ.ರಾಧಾಕೃಷ್ಣನ್, ಇಂಡಿ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.
ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಲಿದ್ದಾರೆ. ಸಂಜೆ ನಂತರ ಫಲಿತಾಂಶ ಪ್ರಕಟಗೊಳ್ಳಲಿದೆ. ಬಹುತೇಕ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವು ಸ್ಪಷ್ಟವಾಗಿದೆ.
ಈ ಮಧ್ಯೆ ಬಿಆರ್‌ಎಸ್ ಮತ್ತು ಬಿಜೆಡಿ ಪಕ್ಷಗಳು ಚುನಾವಣೆಯಿಂದ ದೂರ ಉಳಿಯುತ್ತಿರುವುದರಿಂದ ಸಂಖ್ಯಾಬಲದ ಆಧಾರದ ಮೇಲೆ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ಯೂರಿಯಾ ಕೊರತೆಯಿಂದಾಗಿ ತೆಲಂಗಾಣದ ರೈತರು ಅನುಭವಿಸುತ್ತಿರುವ ಸಮಸ್ಯೆಯನ್ನು ಎತ್ತಿ ತೋರಿಸುವ ಸಲುವಾಗ ತಮ್ಮ ಪಕ್ಷವು ಮತದಾನದಿಂದ ದೂರ ಉಳಿಯಲಿದೆ ಎಂದು ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ ಟಿ ರಾಮರಾವ್ ತಿಳಿಸಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿ ಬಣ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳುವ ತನ್ನ ನೀತಿಯ ಭಾಗವಾಗಿ ಮತದಾನದಿಂದ ದೂರವಿರುವ ನಿರ್ಧಾರವನ್ನು ಬಿಜೆಡಿ ತಿಳಿಸಿದೆ.
