ಉದಯವಾಹಿನಿ, ಪಾಟ್ನಾ : ಇಲ್ಲಿನ ದೇವಸ್ಥಾನವೊಂದರಲ್ಲಿ ಯುವತಿಯರಿಬ್ಬರು ಸಲಿಂಗ ವಿವಾಹವಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಾವು ಪರಸ್ಪರ ಒಪ್ಪಿಯೇ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.ಮಾಧೇಪುರ ಜಿಲ್ಲೆಯ ನಿವಾಸಿಗಳಾದ ಈ ಯುವತಿಯರು ತ್ರಿವೇಣಿಗಂಜ್ ಮುನ್ಸಿಪಲ್ ಕೌನ್ಸಿಲ್ ಪ್ರದೇಶದ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಇದೀಗ, ಅವರ ಬಂಧಕ್ಕೆ ವಿವಾಹದ ನಂಟು ಬೆಸೆದಿದ್ದಾರೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ.
ಇನ್ಸ್ಟಾ ಮೂಲಕ ಪರಿಚಯ: ಈ ಇಬ್ಬರು ಯುವತಿಯರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದರು. ಆರಂಭಿಕ ಸ್ನೇಹ ಕ್ರಮೇಣ ಆಳವಾದ ಭಾವನಾತ್ಮಕ ಬಂಧವಾಗಿ ಅರಳಿದೆ. ವರ್ಷಗಳಿಂದ ಸಂಪರ್ಕದಲ್ಲಿದ್ದರಿಂದ ಪರಸ್ಪರ ಅರ್ಥ ಮಾಡಿಕೊಂಡ ನಂತರ ಮತ್ತು ಒಟ್ಟಿಗೆ ಜೀವನ ಕಳೆಯಲು ನಿರ್ಧರಿಸಿದ್ದಾರೆ.
ಅದರಂತೆ, ಡಿಸೆಂಬರ್ 23ರಂದು ರಾತ್ರಿ ಇಲ್ಲಿನ ಮೇಳ ಮೈದಾನದಲ್ಲಿರುವ ಕಾಳಿ ದೇವಸ್ಥಾನದಲ್ಲಿ ಯುವತಿ ಇನ್ನೊಬ್ಬಾಕೆಗೆ ಕುಂಕುಮ ಹಚ್ಚುವ ಸಂಪ್ರದಾಯದ ಮೂಲಕ ಸರಳವಾಗಿ ವಿವಾಹವಾಗಿದ್ದಾರೆ. ಈ ಕ್ಷಣಕ್ಕೆ ದೇವಾಲಯದಲ್ಲಿನ ಕೆಲವರು ಸಾಕ್ಷಿಯಾಗಿದ್ದಾರೆ. ಮದುವೆಯ ಬಳಿಕ, ಈ ಸಲಿಂಗಿ ಜೋಡಿ ಗ್ಯಾಸ್ ಸ್ಟೌವ್ ಹಚ್ಚಿ ಅದರ ಸುತ್ತ ಏಳು ಸುತ್ತು ಹಾಕುವ ಮೂಲಕ ಸಪ್ತಪದಿ ತುಳಿಯುವ ಮೂಲಕ ಒಟ್ಟಿಗೆ ಬಾಳುವ ಪ್ರತಿಜ್ಞೆ ಮಾಡಿದ್ದಾರೆ. ಸಲಿಂಗಿಗಳ ವಿವಾಹವನ್ನು ವಿಡಿಯೋ ಮಾಡಲಾಗಿದ್ದು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.ಯುವತಿಯರಿಬ್ಬರು ಕಳೆದ ಎರಡು ತಿಂಗಳಿನಿಂದ ಸುಫೌಲ್ ಪ್ರದೇಶದ 18ನೇ ವಾರ್ಡ್ನ ಮನೆಯೊಂದರಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಮರುದಿನ ಇಬ್ಬರೂ ಮದುವೆಯಾದ ಬಗ್ಗೆ ಸುತ್ತಲಿನ ಜನರಿಗೆ ಗೊತ್ತಾಗಿದೆ. ಇದು ಜನರಲ್ಲಿ ಕುತೂಹಲದ ಜೊತೆಗೆ ಅಚ್ಚರಿಯನ್ನೂ ಮೂಡಿಸಿದೆ. ಈ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಜನರು ಯುವತಿಯರ ಮನೆಯ ಮುಂದೆ ಜಮಾಯಿಸಿದ್ದರು.
