ಉದಯವಾಹಿನಿ, ಬಿಹಾರ: ಒಂಟಿ ಮಹಿಳೆ ಪ್ರಯಾಣಿಸುತ್ತಿದ್ದ ರೈಲು ಬೋಗಿಯೊಳಗೆ ಏಕಕಾಲಕ್ಕೆ 30ರಿಂದ 40 ಪುರುಷರು ಬಂದಿದ್ದು ಇದರಿಂದ ಗಾಬರಿಯಾದ ಮಹಿಳೆ ರೈಲಿನ ಶೌಚಾಲಯದೊಳಗೆ ಪ್ರವೇಶಿಸಿ ಸಿಕ್ಕಿ ಹಾಕಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ. ತಾನು ಗಾಬರಿಯಾಗಿರುವ ಕುರಿತು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದಾಳೆ. ಇದು ವೈರಲ್ ಆಗಿದ್ದು, ಮಾಹಿತಿ ತಿಳಿದ ಕೂಡಲೇ ರೈಲು ಅಧಿಕಾರಿಗಳು ಆಕೆಯ ರಕ್ಷಣೆಗೆ ಧಾವಿಸಿದರು. ಈ ಘಟನೆ ಬಿಹಾರದ ಕತಿಹಾರ್ ನಲ್ಲಿ ನಡೆದಿದೆ.
ಬಿಹಾರದ ಕತಿಹಾರ್ ಜಂಕ್ಷನ್ ನಿಂದ ಒಂಟಿಯಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಇದ್ದ ಬೋಗಿಯೊಳಗೆ 30ರಿಂದ 40 ಪುರುಷರು ಏಕಾಏಕಿ ಪ್ರವೇಶಿಸಿದ್ದಾರೆ. ಇದರಿಂದ ಗಾಬರಿಯಾದ ಮಹಿಳೆ ಈ ಸ್ಥಳ ತನಗೆ ಅಸುರಕ್ಷಿತವೆಂದು ಭಾವಿಸಿ ರೈಲು ಶೌಚಾಲಯದೊಳಗೆ ಪ್ರವೇಶಿಸಿದ್ದಾರೆ. ಬಳಿಕ ಇದರ ವಿಡಿಯೊ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ರೈಲ್ವೆ ರಕ್ಷಣಾ ಪಡೆ ಬರುವವರೆಗೂ ಅವರು ಶೌಚಾಲಯದೊಳಗೆ ಇದ್ದರು ಎಂದು ಹೇಳಿದ್ದಾರೆ. ಮಹಿಳೆ ವಿಡಿಯೊದಲ್ಲಿ ತನ್ನ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ತಾವು ನಿಗದಿತ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಅಷ್ಟರಲ್ಲಿ ಯುವಕರ ಗುಂಪೊಂದು ಬೋಗಿಯೊಳಗೆ ನುಗ್ಗಿದ್ದು, ಜೋರಾಗಿ ಕೂಗುತ್ತಾ ಮತ್ತು ಪರಸ್ಪರ ತಳ್ಳುತ್ತಾ ಬಂದಿದ್ದಾರೆ. ಇದರಿಂದ ತಮಗೆ ಹೊರ ಹೋಗುವುದು ಅಸಾಧ್ಯವಾಗಿದೆ. ಕೂಡಲೇ ರೈಲು ಶೌಚಾಲಯದೊಳಗೆ ನುಗ್ಗಿದ ಆಕೆ ರೈಲ್ವೆ ಸಹಾಯವಾಣಿ ಸಂಖ್ಯೆ 139 ಕ್ಕೆ ಕರೆ ಮಾಡಿ ಸಹಾಯಕ್ಕಾಗಿ ವರದಿ ಮಾಡಿದರು. ತಕ್ಷಣ ಪ್ರತಿಕ್ರಿಯಿಸಿದ ಆರ್‌ಪಿಎಫ್ ತಂಡ ಬೋಗಿಗೆ ತೆರಳಿ ಜನರನ್ನು ಸರಿಸಿ ಮಹಿಳೆಯನ್ನು ಸುರಕ್ಷಿತವಾಗಿ ಹಿಂದಿರುಗಲು ಸಹಾಯ ಮಾಡಿದರು.
