ಉದಯವಾಹಿನಿ, ಹೈದರಾಬಾದ್: ಸೋಶಿಯಲ್ ಮಿಡಿಯಾದಲ್ಲಿ ಆಗಾಗ ಹೊಸ ಹೊಸ ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ. ರಸ್ತೆಯಲ್ಲಿ ಭೀಕರ ಅಪಘಾತ ಆಗುವುದು, ಸ್ಫೋಟಕ ವಸ್ತು ಅಕಸ್ಮಾತ್ ಸಿಡಿಯುವುದು ಹೀಗೆ ನಾನಾ ಬಗೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಲೇ ಇರುತ್ತದೆ. ಅಂತೆಯೇ ತೆಲಂಗಾಣದಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಒಂದು ಸ್ಫೋಟಗೊಂಡ ವಿಡಿಯೊ ಸದ್ಯ ಸದ್ದು ಮಾಡುತ್ತಿದೆ. ಸಿಲಿಂಡರ್ ಸ್ಫೋಟವು ಭಯಾನಕವಾಗಿ ಆಗಿದ್ದರೂ ಕೂಡ ಅದೃಷ್ಟವಶಾತ್ ಮನೆಯ ಮಂದಿಯೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ತೆಲಂಗಾಣದ ಮೇಡಕ್ ಜಿಲ್ಲೆಯ ಕೌಡಿಪಲ್ಲಿ ಮಂಡಲದ ಮುತ್ರಜಪದ ಗ್ರಾಮದಲ್ಲಿರುವ ಮನೆಯೊಳಗೆ ಸ್ಫೋಟ ಆಗಿದೆ. ಆ ಸಮಯದಲ್ಲಿ ಮನೆಯ ಒಳಗೆ ಯಾರೂ ಇರಲಿಲ್ಲ, ಇದರಿಂದಾಗಿ ದೊಡ್ಡ ದುರಂತವೊಂದು ತಪ್ಪಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ವೇಳೆ ವ್ಯಕ್ತಿಯೊಬ್ಬರು ಹೊರಗೆ ಇದ್ದ ಕಾರಣ ಮನೆಗೆ ಹಾನಿಯಾಗಿದ್ದರೂ ಏನೂ ಆಗಲಿಲ್ಲ.
ಮನೆಯಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಮತ್ತು ಛಾವಣಿಗೆ ಹಾನಿಯಾಗಿದೆ. ಅಲ್ಲದೆ, ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ನಾಶವಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಗೋಡೆಗಳು ಕುಸಿದು ಭಾಗಶಃ ಹಾನಿಯಾಗಿದ್ದ ದೃಶ್ಯಗಳು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದೆ.
