ಉದಯವಾಹಿನಿ, ತಿರುವನಂತಪುರಂ: ಮುಂಬೈಯಲ್ಲಿ ಬಾಂಬ್ ಬೆದರಿಕೆ (Bomb threat) ಬಂದ ಕೆಲವು ದಿನಗಳ ಬಳಿಕ ಕೇರಳದಲ್ಲೂ (Kerala) ಇದೇ ರೀತಿಯ ಬೆದರಿಕೆ ಕರೆ ಬಂದಿದೆ. ಕೇರಳದ ಮುಖ್ಯಮಂತ್ರಿಯ ಅಧಿಕೃತ ನಿವಾಸ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಬೆದರಿಕೆ ಸಂದೇಶ ಬಂದಿದ್ದು, ಇದನ್ನು ಕಳುಹಿಸಿದವರನ್ನು ಪತ್ತೆ ಹಚ್ಚಲು ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಿಲ್ಲಾ ನ್ಯಾಯಾಲಯದ ಅಧಿಕೃತ ಇಮೇಲ್ ಐಡಿಗೆ ಸೋಮವಾರ ಬೆಳಗ್ಗೆ ಈ ಕುರಿತು ಸಂದೇಶವನ್ನು ಕಳುಹಿಸಲಾಗಿತ್ತು. ಕೇರಳ ಮುಖ್ಯಮಂತ್ರಿಯ ಅಧಿಕೃತ ನಿವಾಸ ಮತ್ತು ತಿರುವನಂತಪುರಂ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎನ್ನುವ ಕುರಿತು ಸೋಮವಾರ ಬೆಳಗ್ಗೆ ಇಮೇಲ್ ಸಂದೇಶ ಬಂದ ಬಳಿಕ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದರು.
ಜಿಲ್ಲಾ ನ್ಯಾಯಾಲಯದ ಅಧಿಕೃತ ಇಮೇಲ್ ಐಡಿಗೆ ಸೋಮವಾರ ಬೆಳಗ್ಗೆ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣ ಕೈಗೊಂಡ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸಿದರು. ಬೆದರಿಕೆ ಸಂದೇಶವು ತಮಿಳುನಾಡಿನಿಂದ ಬಂದಿದೆ ಎನ್ನಲಾಗಿದ್ದು, ಇದರಲ್ಲಿ ತಮಿಳುನಾಡು ರಾಜಕೀಯದ ಉಲ್ಲೇಖಗಳಿವೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ನ್ಯಾಯಾಲಯ ಸಂಕೀರ್ಣ, ಕ್ಲಿಫ್ ಹೌಸ್‌ನಲ್ಲಿ ಶೋಧ ನಡೆಸಲು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್), ಶ್ವಾನ ದಳದ ತಂಡಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ಸ್ಫೋಟಕ ಕಂಡುಬಂದಿಲ್ಲ ಮತ್ತು ಇಮೇಲ್ ಬೆದರಿಕೆ ಸುಳ್ಳು. ಇಮೇಲ್ ಕಳುಹಿಸಿದವರನ್ನು ಗುರುತಿಸಲು ತನಿಖೆ ಪ್ರಾರಂಭಿಸಲಾಗಿದೆ ಮತ್ತು ಕಳುಹಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು. ಈ ವರ್ಷ ಇಲ್ಲಿಯವರೆಗೆ ಸುಮಾರು 28 ಇಂತಹ ವಂಚನೆ ಇಮೇಲ್‌ಗಳು ಬಂದಿವೆ. ಸಾಮಾನ್ಯವಾಗಿ ಕ್ಲಿಫ್ ಹೌಸ್, ರಾಜಭವನ, ವಿಮಾನ ನಿಲ್ದಾಣ ಮತ್ತು ನ್ಯಾಯಾಲಯಗಳನ್ನು ಗುರಿಯಾಗಿರಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
