ಉದಯವಾಹಿನಿ, ತಿರುವನಂತಪುರಂ: ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣ ಕೇರಳದಲ್ಲಿ ಆತಂಕ ಸೃಷ್ಟಿಸಿದೆ. ಇದೀಗ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ ಸೋಂಕಿನಿಂದ ಈ ತಿಂಗಳಲ್ಲಿ ಐದನೇ ಸಾವು ಸಂಭವಿಸಿದೆ. ಈ ವರ್ಷ ದಾಖಲಾದ 42ನೇ ಪ್ರಕರಣ ಇದಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಲುಷಿತ ನೀರಿನ ಮೂಲಗಳಲ್ಲಿ ಸ್ನಾನ ಮಾಡುವಾಗ ಅಥವಾ ಈಜುವಾಗ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ ಅಪರೂಪದ ಮತ್ತು ಅತ್ಯಂತ ಮಾರಕ ಮೆದುಳಿನ ಸೋಂಕು ಆಗಿದೆ.
ಮಲಪ್ಪುರಂ ಜಿಲ್ಲೆಯ ವಂಡೂರಿನ 56 ವರ್ಷದ ಮಹಿಳೆ ಶೋಭನಾ ಇತ್ತೀಚೆಗೆ ಸಾವನ್ನಪ್ಪಿದ್ದಾರೆ. ಅವರಿಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ದೇಹವನ್ನು ಪ್ರಸ್ತುತ ಆಸ್ಪತ್ರೆಯಲ್ಲೇ ಇರಿಸಲಾಗಿದೆ.
ಸುಲ್ತಾನ್ ಬತ್ತೇರಿ ಮೂಲದ 45 ವರ್ಷದ ರತೀಶ್ ಎಂಬವರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರು ಸಾವನ್ನಪ್ಪಿದ ಕೇವಲ ಎರಡು ದಿನಗಳ ಬಳಿಕ ಶೋಭನಾ ಮೃತಪಟ್ಟಿದ್ದಾರೆ. ರತೀಶ್ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಮೂವರು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ನಿಂದ ಸಾವನ್ನಪ್ಪಿದ್ದಾರೆ. ತಿಂಗಳೊಳಗೆ ಈ ಸೋಂಕಿನಿಂದ ಕೇರಳದಲ್ಲಿ ಒಟ್ಟು ಸಾವಿನ ಸಂಖ್ಯೆ ಐದಕ್ಕೆ ಏರಿದೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೋಂಕಿನ ಲಕ್ಷಣಗಳಿರುವ 11 ರೋಗಿಗಳು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!