ಉದಯವಾಹಿನಿ, ಬೆಂಗಳೂರು: ಮದ್ದೂರು ಗಲಾಟೆ ಪ್ರಕರಣದಲ್ಲಿ ಬಿಜೆಪಿಯವರು ಬೆಂಕಿ ಹಚ್ಚೋ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಕಾನೂನು ಸಲಹೆಗಾರ, ಶಾಸಕ ಪೊನ್ನಣ್ಣ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಿಂದ ಮದ್ದೂರು ಚಲೋ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮದ್ದೂರಿನಲ್ಲಿ ಆಗಿರೋ ಘಟನೆ ಖಂಡನೀಯ. ಎಲ್ಲರೂ ಖಂಡಿಸುತ್ತಾರೆ. ಆದರೆ ಇದಕ್ಕೆ ಕುಮ್ಮಕ್ಕು ಯಾರು ಕೊಟ್ಟಿದ್ದಾರೆ ಅಂತ ಜನರಿಗೆ ಗೊತ್ತಿದೆ. ಅಲ್ಲಿ ಕಲ್ಲು ಎಸೆದರವರು, ಘಟನೆಗೆ ಕಾರಣ ಆಗಿರೋರು ಯಾರು ಅಲ್ಲಿಯವರಲ್ಲ, ಹೊರಗಿನಿಂದ ಬಂದವರು. ಈಗಾಗಲೇ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿ ತನಿಖೆ ಆಗುತ್ತಿದೆ. ಬಿಜೆಪಿಯವರಿಗೆ ಯಾವುದೇ ತನಿಖೆ ಆಗಬಾರದು. ಇವರೇ ನ್ಯಾಯಾಧೀಶರಾಗಿ ತೀರ್ಪು ಕೊಡುತ್ತಾರೆ. ಬಿಜೆಪಿ ಅವರು ಬೆಂಕಿ ಹಚ್ಚೋ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.

ಸಾಮರಸ್ಯ ಕಾಪಾಡೋ ಕೆಲಸ ಬಿಜೆಪಿ ಮಾಡಬೇಕು. ಆದರೆ ಸಾಮರಸ್ಯ ಹಾಳು ಮಾಡೋ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆ ಆದಾಗ ಬಿಜೆಪಿಯವರು ಹದ್ದುಗಳ ತರಹ ಕಾಯುತ್ತಿರುತ್ತಾರೆ. ಇಂತಹ ಘಟನೆ ಬಳಸಿಕೊಂಡು ಸಮಾಜದಲ್ಲಿ ಒಡಕು ಮೂಡಿಸೋಕೆ ಕಾಯುತ್ತಿರುತ್ತಾರೆ. ಹೀಗಾಗಿ ಬಿಜೆಪಿಯವರನ್ನ ಜನ ಗಂಭೀರವಾಗಿ ಪರಿಗಣಿಸಿಲ್ಲ. ಈಗಾಗಲೇ ತನಿಖೆ ಆಗುತ್ತಿದೆ. 22 ಜನರ ಬಂಧನ ಆಗಿದೆ. ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಆಗುತ್ತದೆ. ತನಿಖೆ ಬಳಿಕ ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!