ಉದಯವಾಹಿನಿ, ಅಥೆನ್ಸ್: 24 ಬಾರಿಯ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್(Novak Djokovic) ತಮ್ಮ ಕುಟುಂಬವನ್ನು ಸದ್ದಿಲ್ಲದೆ ಗ್ರೀಸ್‌ಗೆ ಸ್ಥಳಾಂತರಿಸಿದ್ದಾರೆ. ಸೆರ್ಬಿಯಾದಲ್ಲಿ ಸರ್ಕಾರಿ ಪರ ವಲಯಗಳಿಂದ ಹೆಚ್ಚುತ್ತಿರುವ ಒತ್ತಡದಿಂದಾಗಿ ಅವರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಸೆರ್ಬಿಯನ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಜೊಕೊವಿಕ್ ಬಹಿರಂಗವಾಗಿ ಬೆಂಬಲ ನೀಡಿದ್ದರು. ಈ ಮಧ್ಯೆ, ಜೊಕೊವಿಕ್ ತಮ್ಮ ಇಬ್ಬರು ಮಕ್ಕಳಾದ 11 ವರ್ಷದ ಸ್ಟೀಫನ್ ಮತ್ತು 8 ವರ್ಷದ ತಾರಾ ಅವರನ್ನು ಅಥೆನ್ಸ್‌ನ ಸೇಂಟ್ ಲಾರೆನ್ಸ್ ಕಾಲೇಜಿನಲ್ಲಿ ಸೇರಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಜೊಕೊವಿಕ್ ಗ್ರೀಕ್ ರಾಜಧಾನಿಯಲ್ಲಿ ತಮ್ಮ ಕುಟುಂಬಕ್ಕಾಗಿ ಮನೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಇದರ ಜತೆಗೆ, ಜೊಕೊವಿಕ್ ಗ್ರೀಕ್ ಗೋಲ್ಡನ್ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ಊಹಾಪೋಹಗಳು ಹುಟ್ಟಿಕೊಂಡಿದೆ. ಸೆರ್ಬಿಯನ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಜೊಕೊವಿಕ್ ಬೆಂಬಲ ವ್ಯಕ್ತಪಡಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ನೋವಿ ಸ್ಯಾಡ್‌ನ ರೈಲು ನಿಲ್ದಾಣದಲ್ಲಿ 16 ಜೀವಗಳನ್ನು ಬಲಿ ಪಡೆದ ದುರಂತ ಘಟನೆಯಿಂದ ಪ್ರತಿಭಟನೆಗಳು ಭುಗಿಲೆದ್ದವು. ಇದಕ್ಕೆ ಪ್ರತಿಕ್ರಿಯೆಯಾಗಿ, ವಿದ್ಯಾರ್ಥಿಗಳು ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಜೊಕೊವಿಕ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ, ಆಸ್ಟ್ರೇಲಿಯನ್ ಓಪನ್ ಗೆಲುವನ್ನು ಗಾಯಗೊಂಡ ವಿದ್ಯಾರ್ಥಿಗೆ ಅರ್ಪಿಸಿದ್ದರು. “ವಿದ್ಯಾರ್ಥಿಗಳು ಚಾಂಪಿಯನ್‌ಗಳು” ಎಂಬ ಸ್ವೆಟರ್ ಧರಿಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಇದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು.

Leave a Reply

Your email address will not be published. Required fields are marked *

error: Content is protected !!