ಉದಯವಾಹಿನಿ, ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ಮಡೆನೂರು ಮನು, ʻಕುಲದಲ್ಲಿ ಕೀಳ್ಯಾವುದೊʼ ಚಿತ್ರದ ಮೂಲಕ ನಾಯಕನಾದರು. ಪ್ರಸ್ತುತ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮನು ತಮ್ಮ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ.
ಚಿತ್ರಕ್ಕೆ ʻಮುತ್ತರಸʼ ಎಂದು ಹೆಸರಿಡಲಾಗಿದೆ. ಜೆ.ಕೆ ಮೂವೀಸ್ ಲಾಂಛನದಲ್ಲಿ ಕೆ.ಎಂ ನಟರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಖ್ಯಾತ ನಟ ವಸಿಷ್ಠ ಸಿಂಹ ಹಿರಿಯ ನಟರಾದ ಎಂ.ಎಸ್.ಉಮೇಶ್, ಕರಿ ಸುಬ್ಬು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿ, ಮಡೆನೂರ್ ಮನು ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿ ಅವರು ಶೀರ್ಷಿಕೆ ಅನಾವರಣ ಮಾಡಿದರು. ನಂತರ ಸಿನಿಮಾ ತಂಡದವರು ಹಾಗೂ ಗಣ್ಯರು ಮಾತನಾಡಿದರು.

ಕೆಲವು ದಿನಗಳ ಹಿಂದೆ ನನ್ಮ ಜೀವನದಲ್ಲಿ ಆದ ಕಹಿ ಘಟನೆಗಳನೆಲ್ಲಾ ಮರೆತಿದ್ದೇನೆ. ಸದ್ಯಕ್ಕೆ ಯಾವುದೇ ಸಮಸ್ಯೆಗಳು ಇಲ್ಲ. ಆ ಸಮಯದಲ್ಲಿ ನನ್ನ ಜೊತೆಗೆ ನಿಂತವರಿಗೆ ನಾನು ಚಿರಋಣಿ.ನನ್ನ ಹೊಸ ಸಿನಮಾದ ಶೀರ್ಷಿಕೆ ಬಿಡುಗಡೆಯಾಗಿದೆ. ಅನಾವರಣ ಮಾಡಿಕೊಟ್ಟ ವಸಿಷ್ಠ ಸಿಂಹ ಅವರು ಸೇರಿದಂತೆ ಪ್ರತಿಯೊಬ್ಬ ಗಣ್ಯರಿಗೆ ಧನ್ಯವಾದ. ನಾನು ವಸಿಷ್ಠ ಸಿಂಹ ಅವರೊಟ್ಟಿಗೆ ʻತಲ್ವಾರ್ ಪೇಟೆʼ ಚಿತ್ರದಲ್ಲಿ ನಟಿಸಿದ್ದೇನೆ. ಇನ್ನೂ ʻಮುತ್ತರಸʼ ಚಿತ್ರದ ಶೀರ್ಷಿಕೆ ಕೊಟ್ಟದ್ದು ನಿರ್ದೇಶಕ ರಾಮ್ ನಾರಾಯಣ್ ಅವರು. ಮುಂದಿನ ತಿಂಗಳಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ನಿರ್ದೇಶಕರು ಯಾರು? ತಾರಾಬಳಗದಲ್ಲಿ ಯಾರಿದ್ದಾರೆ? ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಈ ಸಂದರ್ಭದಲ್ಲಿ ಎನ್‌.ಆರ್ ರಮೇಶ್, ಶಿವಕುಮಾರ್ ನಾಯಕ್, ಯೋಗರಾಜ್ ಭಟ್ ಹಾಗೂ ನನ್ನ ಹಿಂದಿನ ಚಿತ್ರದ ನಿರ್ಮಾಪಕರಾದ ಸಂತೋಷ್ ಕುಮಾರ್, ವಿದ್ಯಾ ಮತ್ತು ನಿರ್ದೇಶಕ ರಾಮ್ ನಾರಾಯಣ್ ಅವರನ್ನು ನೆನೆಯುತ್ತೇನೆ ಎಂದು ತಿಳಿಸಿದ ನಟ ಮಡೆನೂರ್ ಮನು, ಈ ವರ್ಷದ ಕೊನೆಗೆ ನಾನು ನಟಿಸಿರುವ ʻವಿಚಾರಣೆʼ ಚಿತ್ರ ಸಹ ತೆರೆಗೆ ಬರಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!