ಉದಯವಾಹಿನಿ, ಬೆಂಗಳೂರು: ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಣೆ ಮತ್ತು ಸುಮಾರು 2 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಜವಳಿ ನೀತಿ ರೂಪಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ನೂತನ ಜವಳಿ ನೀತಿ ರಚನೆಗೆ ಸಲಹೆ ಪಡೆಯಲು ವಿಧಾನಸೌಧದಲ್ಲಿ ಕರೆದಿದ್ದ ಜನಪ್ರತಿನಿಧಿಗಳು, ಜವಳಿ ಉದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಇಂದಿನ ಸಭೆಯಲ್ಲಿ ವ್ಯಕ್ತವಾಗಿರುವ ಸಲಹೆಗಳನ್ನು ಪರಿಗಣಿಸಿ ಜವಳಿ ನೀತಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜವಳಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2020ರಿಂದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮಗಳ ಆಡಿಟ್‌ ಆಗಿರಲಿಲ್ಲ. ಈಗ ಆಡಿಟ್‌ ನಡೆದಿದ್ದು, ನಷ್ಟದ ಕಾರಣ ಎರಡನ್ನೂ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಕೈಮಗ್ಗ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಿಗೆ ಖರೀದಿ ಮಾಡಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಶಾಸಕರೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳುವ ಉದ್ದೇಶವಿದೆ. ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಕೈಮಗ್ಗ ಉತ್ಪನ್ನಗಳನ್ನು ಖರೀದಿ ಮಾಡಿದರೆ ಕೈಮಗ್ಗ ನೇಕಾರರಿಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು. ಶೂನ್ಯ ಬಡ್ಡಿ ದರದ ಸಾಲದ ಮೇಲೂ ಜಿಎಸ್‌ಟಿ ವಿಧಿಸುತ್ತಿರುವುದಿಂದ ನೇಕಾರರಿಗೆ ಬಡ್ಡಿ ರಹಿತ ಸಾಲ ಸಿಕ್ಕರೂ ಉಪಯೋಗ ಆಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಸಹಕಾರದೊಂದಿಗೆ ಜಿಎಸ್‌ಟಿ ತೆರವಿಗೆ ಪ್ರಯತ್ನ ಮಾಡಲಾಗುವುದು. ಬೆಳಗಾವಿಯಲ್ಲಿ ಜವಳಿ ಸಂಶೋಧನಾ ಕೇಂದ್ರ ಆರಂಭಿಸಲಾಗುವುದು. ಚರ್ಮಹೊರತುಪಡಿಸಿ ತಯಾರಾಗುವ ಚಪ್ಪಲಿ ಮತ್ತು ಶೂ ಉದ್ಯಮದ ಅಭಿವೃದ್ಧಿ ಬಗ್ಗೆಯೂ ನೀತಿ ರೂಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಸಣ್ಣ ಕೈಗಾರಿಕೆ ಕ್ಷೇತ್ರದ ಅಡಿಯಲ್ಲಿ ಬರುವ ಈ ಉದ್ಯಮವನ್ನು ಜವಳಿ ನೀತಿಯಲ್ಲಿ ಪರಿಗಣಿಸುವ ಪ್ರಯತ್ನ ಮಾಡಲಾಗುವುದು ಎಂದರು.

 

 

Leave a Reply

Your email address will not be published. Required fields are marked *

error: Content is protected !!