ಉದಯವಾಹಿನಿ, ಚಿಕ್ಕಬಳ್ಳಾಪುರ: ರಾಜ್ಯದೆಲ್ಲೆಡೆ ಗಣೇಶ ವಿಸರ್ಜನಾ ಮೆರವಣಿಗೆಗಳು ಜೋರಾಗಿ ಸಾಗುತ್ತಿದ್ದರೆ, ಕೆಲ ಕಡೆಗಳಲ್ಲಿ ನಡೆದ ಅಹಿತಕರ ಘಟನೆಗಳಿಂದ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಪಟಾಕಿ ಸ್ಫೋಟದಿಂದ ಇಬ್ಬರು ಬಾಲಕರ ಸಾವು, ಮದ್ದೂರಿನಲ್ಲಿ ಕಲ್ಲುತೂರಾಟ ಗಲಾಟೆ, ಹಾಸನದಲ್ಲಿ ಮೆರವಣಿಗೆಯ ವೇಳೆ ಆದ ಅಪಘಾತದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆ ಪೊಲೀಸರೂ ಫುಲ್‌ ಅಲರ್ಟ್‌ ಆಗಿದ್ದಾರೆ.
ಪ್ರತಿಷ್ಠಿತ ಬೈಪಾಸ್ ಗಣೇಶೋತ್ಸವ 22ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಾರಿ 22 ಅಡಿ ಎತ್ತರದ ಪ್ರಣವ ಮಹಾರುದ್ರ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಪೆಂಡಾಲ್‍ನಲ್ಲಿ ದೇಶದ ಪ್ರಸಿದ್ಧ ದೇವಾಲಯಗಳ ಮಾದರಿಗಳನ್ನು ಅಲಂಕರಿಸಿರುವುದು ಭಕ್ತರ ಗಮನ ಸೆಳೆದಿದೆ. ಭಾನುವಾರ ನಡೆಯಲಿರುವ ಗಂಗಾವಿಲೀನ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಂಭಾವ್ಯ ಅಹಿತಕರ ಘಟನೆಗಳನ್ನ ತಪ್ಪಿಸಲು ಜಿಲ್ಲೆಯ ಎಸ್ಪಿ ಕುಶಲ್ ಚೌಕ್ಸಿ ನೇತೃತ್ವದಲ್ಲಿ ಹಲವು ಶಾಂತಿ ಸಭೆಗಳನ್ನು ನಡೆಸಲಾಗಿದೆ. ಮುನ್ನೆಚ್ಚರಿಕೆಯಾಗಿ ಗೌರಿಬಿದನೂರು ಪಟ್ಟಣದಲ್ಲಿ ಭಾರೀ ಪೊಲೀಸರ ಪಥಸಂಚಲನ ನಡೆಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಮೆರವಣಿಗೆ ಸರಿಸುಮಾರು ಸಂಜೆ 8ರ ವರೆಗೆ ಸಾಗಲಿದ್ದು, 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗುತ್ತಿದೆ. ಮಸೀದಿ, ಮಂದಿರ, ಚರ್ಚ್ ಮುಂತಾದ ಧಾರ್ಮಿಕ ಕೇಂದ್ರಗಳ ಬಳಿ ವಿಶೇಷ ಭದ್ರತೆ ಏರ್ಪಡಿಸಲಾಗಿದೆ. ಸಿಸಿ ಟಿವಿಗಳನ್ನ ಆಳವಡಿಸಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಬಳಸಿ ವಿಡಿಯೋ ಚಿತ್ರೀಕರಣ ಸಹ ಮಾಡಿಸಲು ತೀರ್ಮಾನ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!