ಉದಯವಾಹಿನಿ, ನವದೆಹಲಿ: ಇಸ್ರೇಲ್ ದಾಳಿಗಳ ವಿರುದ್ಧ ಕತಾರ್ ಅನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾದ ಕತಾರ್ ಮೇಲಿನ ಇತ್ತೀಚಿನ ಇಸ್ರೇಲ್ ದಾಳಿಗಳ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವಕೀಲರು ಪಾಕಿಸ್ತಾನವನ್ನು ಪ್ರಾಯೋಜಿತ ಭಯೋತ್ಪಾದನೆಯ ರಾಷ್ಟ್ರ ಎಂದು ಕರೆದರು. ಇದರಿಂದ ಪಾಕಿಸ್ತಾನ ತೀವ್ರ ಮುಖಭಂಗ ಎದುರಿಸುವಂತಾಯಿತು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಮಾನವ ಹಕ್ಕುಗಳ ವಕೀಲ ಮತ್ತು ಯುಎನ್ ವಾಚ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಿಲ್ಲೆಲ್ ನ್ಯೂಯರ್ ಇಸ್ರೇಲ್ ದಾಳಿಗಳ ವಿರುದ್ಧ ಕತಾರ್ ಅನ್ನು ಬೆಂಬಲಿಸಿದ ಪಾಕಿಸ್ತಾನವನ್ನು ಭಯೋತ್ಪಾದನೆಯ ಮತ್ತೊಂದು ಪ್ರಾಯೋಜಕ ರಾಷ್ಟ್ರ ಎಂದು ಕರೆದರು.
ಇಸ್ರೇಲಿ ದಾಳಿಗಳ ವಿರುದ್ಧ ಕತಾರ್‌ಗೆ ಬೆಂಬಲ ನೀಡಿದ ಹಲವು ದೇಶಗಳಲ್ಲಿ ಪಾಕಿಸ್ತಾನವು ಸೇರಿತ್ತು. ವಿಶ್ವದ ಅತ್ಯಂತ ಕೆಟ್ಟ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸುವವರಿಂದ ನಾವು ಕಾನೂನಿನ ಬಗ್ಗೆ ಬಹಳಷ್ಟು ಕೇಳಿದ್ದೇವೆ. ಅಪರಾಧಿಗಳನ್ನು ಸವಾಲು ಮಾಡುವ ಸಮಯ ಇದು ಎಂದು ಅವರು ಹೇಳಿದರು.
ಕತಾರ್ ನಿಯೋಗದೊಂದಿಗೆ ಮಾತನಾಡಿದ ನ್ಯೂಯರ್, ರಾಜಧಾನಿಯಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವುದೇಕೆ ಎಂದು ಪ್ರಶ್ನಿಸಿದ ಅವರು ಒತ್ತೆಯಾಳುಗಳನ್ನು ಇಟ್ಟುಕೊಂಡು ಅವರನ್ನು ಹಿಂಸಿಸುತ್ತಿರುವ ಮತ್ತು ಶಾಂತಿ ಒಪ್ಪಂದಗಳನ್ನು ತಿರಸ್ಕರಿಸುತ್ತಿರುವವರು ಭಯೋತ್ಪಾದಕರು ಎಂದು ಹೇಳಿದರು.
ಭಯೋತ್ಪಾದಕರು ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಐಷಾರಾಮಿ ಹೊಟೇಲ್ ಗಳಲ್ಲಿ ಏಕೆ ಆಶ್ರಯ ಪಡೆದಿದ್ದಾರೆ ಎಂದು ಪ್ರಶ್ನಿಸಿದ ಅವರು, 2007ರಲ್ಲಿ ಹಮಾಸ್ ಗಾಜಾವನ್ನು ವಶಪಡಿಸಿಕೊಳ್ಳಲು ಕತಾರ್ ಏಕೆ ಬೆಂಬಲ ನೀಡಿತು ಎಂದು ಪ್ರಶ್ನಿಸಿದರು.
