ಉದಯವಾಹಿನಿ, 2025 ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಉಭಯ ದೇಶಗಳ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ. ಪಹಲ್ಗಾಮ್ ದಾಳಿಯ ನಂತರ, ಭಾರತ ತಂಡವು ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧ ಆಡಲಿದೆ. ಆದಾಗ್ಯೂ ಈ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬುದು ಭಾರತೀಯರ ಒತ್ತಾಯವಾಗಿದೆ. ಈ ನಡುವೆ ಉಭಯ ದೇಶಗಳಲ್ಲಿ ನಡೆಯುವ ಐಪಿಎಲ್ ಹಾಗೂ ಪಿಎಸ್ಎಲ್ ತಂಡಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ವಾರ್ ಶುರುವಾಗಿದೆ.
ವಾಸ್ತವವಾಗಿ ಐಪಿಎಲ್ ತಂಡವಾದ ಪಂಜಾಬ್ ಕಿಂಗ್ಸ್ ನಿನ್ನೆಯಷ್ಟೇ ಪಾಕಿಸ್ತಾನವನ್ನು ವಿಭಿನ್ನ ರೀತಿಯಲ್ಲಿ ಅವಮಾನಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಪಂಜಾಬ್ ಕಿಂಗ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿತ್ತು. ಆ ಪೋಸ್ಟರ್ಗೆ ಹಾಲಿ ಚಾಂಪಿಯನ್‌ಗಳ ಎರಡನೇ ಪಂದ್ಯ, ಎಂಬ ಶೀರ್ಷಿಕೆ ನೀಡಿದ್ದ ಫ್ರಾಂಚೈಸಿ, ಈ ಪೋಸ್ಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಫೋಟೋ ಮತ್ತು ಭಾರತೀಯ ತಂಡದ ಲೋಗೋವನ್ನು ಮಾತ್ರ ಬಳಸಿತ್ತು. ಅದರಂತೆ ಎದುರಾಳಿ ತಂಡದ ಬಗ್ಗೆಗಿನ ಮಾಹಿತಿ ಹಾಕುವ ಜಾಗವನ್ನು ಹಾಗೆಯೇ ಖಾಲಿ ಬಿಟ್ಟಿತ್ತು. ಪಂಜಾಬ್ ಕಿಂಗ್ಸ್‌ನ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ಪೋಸ್ಟ್ ನೋಡಿದವರಿಗೆ ಇದು ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಲೆಂದೇ ಮಾಡಿರುವ ಪೋಸ್ಟ್ ಎಂಬುದು ಸ್ಪಷ್ಟವಾಗಿ ಅರ್ಥವಾಗಿತ್ತು.
