ಉದಯವಾಹಿನಿ, 2025 ರ ಮಹಿಳಾ ಹಾಕಿ ಏಷ್ಯಾಕಪ್‌ (Women’s Hockey Asia Cup 2025) ಸೂಪರ್ 4 ಸುತ್ತಿನಲ್ಲಿ ಜಪಾನ್ ವಿರುದ್ಧದ ಪಂದ್ಯವನ್ನು 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಳಿಸಿರುವ ಭಾರತೀಯ ಮಹಿಳಾ ಹಾಕಿ ತಂಡ (India vs Japan Hockey) ಟೂರ್ನಿಯಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವು ಬ್ಯೂಟಿ ಡಂಗ್‌ಡಂಗ್ (7 ನೇ ನಿಮಿಷ) ಅವರ ಅದ್ಭುತ ಗೋಲಿನೊಂದಿಗೆ ಆರಂಭಿಕ ಮುನ್ನಡೆ ಸಾಧಿಸಿತು, ಆದರೆ ಜಪಾನ್‌ನ ಶಿಹೋ ಕೊಬಯಕಾವಾ (58 ನೇ ನಿಮಿಷ) ಕೊನೆಯ ಕ್ಷಣಗಳಲ್ಲಿ ಗೋಲು ಗಳಿಸಿ ಸ್ಕೋರ್ ಅನ್ನು ಸಮಬಲಗೊಳಿಸಿದರು. ಈ ಡ್ರಾದೊಂದಿಗೆ, ಭಾರತ ಫೈನಲ್‌ಗೆ ಅರ್ಹತೆ ಪಡೆಯಿತು. ವಾಸ್ತವವಾಗಿ, ಟೀಂ ಇಂಡಿಯಾ ಆಡಿದ 3 ಪಂದ್ಯಗಳಲ್ಲಿ 1 ಪಂದ್ಯವನ್ನು ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನ ಗಳಿಸಿತು. ಇದೀಗ ಫೈನಲ್‌ನಲ್ಲಿ ಚೀನಾ ತಂಡವನ್ನು ಎದುರಿಸಲಿದೆ.

ಪಂದ್ಯದ ಆರಂಭದಲ್ಲಿ, ಭಾರತೀಯ ಮಹಿಳಾ ಹಾಕಿ ತಂಡವು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರ ಫಲವಾಗಿ ಬ್ಯೂಟಿ ಡಂಗ್‌ಡಂಗ್ ತಂಡದ ಪರ ಮೊದಲು ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅಲ್ಲದೆ ಮೊದಲ ಕ್ವಾರ್ಟರ್‌ನ ಕೊನೆಯ ಕ್ಷಣಗಳಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಸಿಕ್ಕಿತ್ತಾದರೂ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲ ಕ್ವಾರ್ಟರ್ 1-0 ಯಲ್ಲಿ ಅಂತ್ಯವಾಯಿತು.
ಎರಡನೇ ಕ್ವಾರ್ಟರ್‌ನಲ್ಲಿ, ಜಪಾನ್ ಸಮಬಲದ ಹುಡುಕಾಟದಲ್ಲಿ ಆಕ್ರಮಣಕಾರಿಯಾಗಿ ಆಟವಾಡಿ ಪೆನಾಲ್ಟಿ ಕಾರ್ನರ್ ಗಳಿಸಿತು. ಆದಾಗ್ಯೂ, ಭಾರತದ ರಕ್ಷಣಾ ಪಡೆ ಅದನ್ನು ಸುಲಭವಾಗಿ ವಿಫಲಗೊಳಿಸಿತು. ಆಟ ಮುಂದುವರೆದಂತೆ, ಭಾರತೀಯ ತಂಡವು ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಆದರೆ ಕ್ವಾರ್ಟರ್ ಅಂತ್ಯದ ವೇಳೆಗೆ, ಜಪಾನ್ ಭಾರತದ ಮೇಲೆ ಒತ್ತಡ ಹೇರಿತು. ಆದರೂ, ಭಾರತದ ರಕ್ಷಣಾ ಪಡೆ ಅದ್ಭುತ ಪ್ರದರ್ಶನ ನೀಡಿ ಜಪಾನ್ ಗೋಲು ಗಳಿಸದಂತೆ ತಡೆದು ಎರಡನೇ ಕ್ವಾರ್ಟರ್​ನಲ್ಲಿಯೂ 1-0 ಮುನ್ನಡೆ ಕಾಯ್ದುಕೊಂಡಿತು.

ಮೂರನೇ ಕ್ವಾರ್ಟರ್‌ನಲ್ಲಿ, ಭಾರತೀಯ ಮಹಿಳಾ ಹಾಕಿ ತಂಡವು ತಮ್ಮ ದಾಳಿಯನ್ನು ತೀವ್ರಗೊಳಿಸಿತ್ತಾದರೂ ಎರಡನೇ ಗೋಲು ಗಳಿಸುವಲ್ಲಿ ವಿಫಲವಾಯಿತು. ಹೀಗಾಗಿ ಮೂರನೇ ಕ್ವಾರ್ಟರ್‌ ಕೂಡ 1-0 ಯಲ್ಲಿ ಅಂತ್ಯವಾಯಿತು. ನಾಲ್ಕನೇ ಮತ್ತು ಅಂತಿಮ ಕ್ವಾರ್ಟರ್‌ನಲ್ಲಿ, ಜಪಾನ್ ತಂಡ ಪಂದ್ಯವನ್ನು ಸಮಬಲಗೊಳಿಸಲು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿತು. ಹಾಲಿ ಚಾಂಪಿಯನ್ ಜಪಾನ್ ಭಾರತೀಯ ರಕ್ಷಣೆಯ ಮೇಲೆ ಒತ್ತಡ ಹೇರಿತು, ಆದರೆ ಭಾರತವು ಅತ್ಯುತ್ತಮ ರಕ್ಷಣೆಯೊಂದಿಗೆ ಅವರ ದಾಳಿಯನ್ನು ವಿಫಲಗೊಳಿಸಿತು. ಕ್ವಾರ್ಟರ್‌ನ ಮಧ್ಯದಲ್ಲಿ, ಭಾರತ ಪ್ರತಿದಾಳಿ ನಡೆಸಿ ಹಲವಾರು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆಯಿತು, ಇದು ಜಪಾನ್ ಮೇಲೆ ಒತ್ತಡವನ್ನು ಹೆಚ್ಚಿಸಿತು. ಆದಾಗ್ಯೂ, ಕೊನೆಯ ನಿಮಿಷಗಳಲ್ಲಿ, ಶಿಹೋ ಕೊಬಯಕಾವಾ ಜಪಾನ್ ಪರವಾಗಿ ಗೋಲು ಬಾರಿಸುವ ಮೂಲಕ 1-1 ರಿಂದ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವಂತೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!