ಉದಯವಾಹಿನಿ, ಬೆಂಗಳೂರು: ಧರ್ಮಸ್ಥಳ ಕೇಸ್‍ಲ್ಲಿ ಷಡ್ಯಂತ್ರ ಮಾಡಿದ ಮುಖ್ಯ ವ್ಯಕ್ತಿಗಳನ್ನು ಎಸ್‍ಐಟಿ ಇನ್ನೂ ಮುಟ್ಟಿಲ್ಲ. ಎಸ್‍ಐಟಿಗೆ ಷಡ್ಯಂತ್ರ ಮಾಡಿದ ದೊಡ್ಡ ವ್ಯಕ್ತಿಗಳನ್ನು ಮುಟ್ಟೋದಕ್ಕೆ ಧೈರ್ಯ ಇಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ದಕ್ಷತೆಯಿಂದ ಶೀಘ್ರದಲ್ಲಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಿ ಎಂದು ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ ಮಾಡಲಾಗಿದೆ. ಆದರೆ ನಿರೀಕ್ಷೆಗೆ ತಕ್ಕಂತೆ ಎಸ್‍ಐಟಿ ತನಿಖೆ ನಡೆಯುತ್ತಿಲ್ಲ. ಪೊಲೀಸ್ ಪದ್ಧತಿ ಪ್ರಕಾರ ತನಿಖೆ ನಡೆಯುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮಾಸ್ಕ್ ಮ್ಯಾನ್ ನೀಡಿದ ದೂರು ಹುಸಿಯಾದ ನಂತರ ಬೇರೆ ಬೇರೆ ದೂರುಗಳು ದಾಖಲಾಗುತ್ತಿವೆ. ಇದ್ಕಕೆ ಎಸ್‍ಐಟಿಗೆ ಉತ್ತರದಾಯಿತ್ವ ಇದೆ, ಜವಾಬ್ದಾರಿ ಇದೆ. ಶೀಘ್ರದಲ್ಲೇ ವರದಿ ಕೊಡಲಿ, ಇದುವರೆಗೆ ಆಗಿರುವ ತನಿಖೆ ಬಗ್ಗೆ ವರದಿ ನೀಡಲಿ. ಈ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಗಳನ್ನು ಎಸ್‍ಐಟಿ ಮುಟ್ಟಿಲ್ಲ. ನಮ್ಮನ್ನು ಮುಟ್ಟಲ್ಲ ಎಂದು ಅವರಿಗೂ ಖಾತ್ರಿ ಆಗಿದೆ. ಅದಕ್ಕಾಗಿ ಅವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಷಡ್ಯಂತ್ರ ಮಾಡಿದವರನ್ನು ಮುಟ್ಟಬೇಡಿ ಎಂದು ರಾಜಕೀಯ ಒತ್ತಡವಿದೆ. ಅದಕ್ಕೆ ಇನ್ನೂ ಯಾರನ್ನೂ ಬಂಧಿಸದೇ ವಿಚಾರಣೆ ಮಾತ್ರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ
